×
Ad

ಸ್ಟಾರ್ಕ್ ಬದಲಿಗೆ ಕಮಿನ್ಸ್ ಆಯ್ಕೆ

Update: 2017-03-11 23:35 IST

ಹೊಸದಿಲ್ಲಿ, ಮಾ.11: ಭಾರತ ವಿರುದ್ಧದ ಮೂರನೆ ಹಾಗೂ ನಾಲ್ಕನೆ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬದಲಿಗೆ ಪ್ಯಾಟ್ ಕಮಿನ್ಸ್‌ರನ್ನು ಆಯ್ಕೆ ಮಾಡಲಾಗಿದೆ.

ಬಲಗಾಲಿನ ಮೂಳೆಮುರಿತಕ್ಕೆ ಒಳಗಾಗಿರುವ ಸ್ಟಾರ್ಕ್ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ಬೆನ್ನುನೋವಿನಿಂದಾಗಿ ದೀರ್ಘಕಾಲದಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ 23ರ ಹರೆಯದ ವೇಗದ ಬೌಲರ್ ಕಮಿನ್ಸ್ ಈವರ್ಷಾರಂಭದಲ್ಲಿ ಆಸೀಸ್ ತಂಡಕ್ಕೆ ವಾಪಸಾಗಿದ್ದರು. ಕಮಿನ್ಸ್ 2011ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಆಡಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

  ಈ ವರ್ಷಾರಂಭದಲ್ಲಿ ಶೀಫೀಲ್ಡ್ ಶೀಲ್ಡ್ಡ್ ಟೂರ್ನಿಯಲ್ಲಿ ಆಡಿದ್ದ ಕಮಿನ್ಸ್ ದಕ್ಷಿಣ ಆಸ್ಟ್ರೇಲಿಯ ವಿರುದ್ಧ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.

 ‘‘ಭಾರತ ವಿರುದ್ಧ ಸರಣಿಯಿಂದ ಸ್ಟಾರ್ಕ್ ಹೊರಗುಳಿದಿರುವುದು ದುರದೃಷ್ಟಕರ. ಸ್ಟಾರ್ಕ್‌ರಿಂದ ತೆರವಾಗಿರುವ ಸ್ಥಾನಕ್ಕೆ ಕಮಿನ್ಸ್‌ರನ್ನು ಆಯ್ಕೆ ಮಾಡಲಾಗಿದ್ದು, ಈ ಋತುವಿನಲ್ಲಿ ಏಕದಿನ, ಟ್ವೆಂಟಿ-20 ಹಾಗೂ ಬಿಗ್‌ಬಾಶ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಅಧಿಕಾರಿ ಟ್ರೆವರ್ ಹಾನ್ಸ್ ಹೇಳಿದ್ದಾರೆ.

ಹಲವು ಸೀಮಿತ ಓವರ್ ಪಂದ್ಯಗಳಲ್ಲಿ ಆಡಿರುವ ಕಮಿನ್ಸ್ 2015ರ ಆ್ಯಶಸ್ ಸರಣಿಯ ವೇಳೆ ರಿಯಾನ್ ಹ್ಯಾರಿಸ್ ನಿವೃತ್ತಿಯಾದಾಗ ಹಾಗೂ ಸ್ಟಾರ್ಕ್ ಗಾಯಗೊಂಡಾಗ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದರು. ಸತತವಾಗಿ ಗಾಯದ ಸಮಸ್ಯೆಯನ್ನು ಎದುರಿಸಿದ್ದ ಕಮಿನ್ಸ್ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಪಡೆದಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News