×
Ad

ಅಚ್ಚರಿಯ ಸೋಲು, ಗೆಲುವು ದಾಖಲಿಸಿದ ಮಣಿಪುರ ಚುನಾವಣೆ ಫಲಿತಾಂಶ

Update: 2017-03-11 23:50 IST

ಎರಡು ಹಂತದಲ್ಲಿ ನಡೆದ ಮಣಿಪುರ ವಿಧಾನಸಭೆಯ ಚುನಾವಣೆಯ ಫಲಿತಾಂಶ ಕೆಲವು ಅಚ್ಚರಿಯ ಸೋಲು, ಗೆಲುವಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಇಬೊಬಿ ಸಿಂಗ್ ನಾಲ್ಕನೆ ಬಾರಿ ವಿಜಯ ಪತಾಕೆ ಹಾರಿಸಿದರೆ, ಭಾರೀ ನಿರೀಕ್ಷೆ ಮೂಡಿಸಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಸೋಲುಂಡಿದ್ದಾರೆ. ಬಿಜೆಪಿಯ ಹಲವು ಪ್ರಮುಖ ನಾಯಕರೂ ಸೋತವರ ಸಾಲಿನಲ್ಲಿದ್ದಾರೆ. 

ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರು ಥೌಬಾಲ್ ಕ್ಷೇತ್ರದಿಂದ ನಾಲ್ಕನೆ ಬಾರಿ ಗೆಲುವು ಸಾಧಿಸಿದ್ದರೂ, ಉಪಮುಖ್ಯಮಂತ್ರಿ ಗೈಖಾಂಗಮ್ ಗಾಂಗ್ಮೈ ಅವರು ನುಂಬಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆದಿಮ್ ಪಮೈ ಎದುರು ಸೋಲುಂಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್. ಹೋಕಿಪ್ ತಮ್ಮ ಕ್ಷೇತ್ರವಾದ ಸೈಕೋಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಇನ್ನೋರ್ವ ಪ್ರಮುಖ ಮುಖಂಡ, ಕಾಂಗ್ರೆಸ್ ತ್ಯಜಿಸಿ ನ್ಯಾಶನಲ್ ಪೀಪಲ್ಸ್ ಪಾರ್ಟಿ ಸೇರಿಕೊಂಡ ಫುಂಝಥಂಗ್ ತಾನ್ಸಿಂಗ್ ಅವರು ಚುರಚಾಂದ್‌ಪುರ ನಗರ ಕ್ಷೇತ್ರದಲ್ಲಿ ಬಿಜೆಪಿಯ ವಿ.ಹಾಂಗ್‌ಖನ್ಲಿಯನ್ ಎದುರು ಸೋಲುಂಡಿದ್ದಾರೆ. 2015ರಲ್ಲಿ ಈ ಕ್ಷೇತ್ರದಲ್ಲಿ ಭಾರೀ ಹಿಂಸಾತ್ಮಕ ಘಟನೆ ನಡೆದಿದ್ದು 9 ಯುವಕರು ಮೃತಪಟ್ಟಿದ್ದರು. ಈ ಸಂದರ್ಭ ಪಕ್ಷ ತ್ಯಜಿಸದೆ, ತಮ್ಮ ಸ್ವಾರ್ಥಕ್ಕಾಗಿ ಚುನಾವಣೆ ಸಂದರ್ಭ ಪಕ್ಷ ತ್ಯಜಿಸಿದ್ದಾರೆ ಎಂಬ ಸಿಟ್ಟಿನಿಂದ ಕ್ಷೇತ್ರದ ಮತದಾರರು ಇವರ ವಿರುದ್ಧ ನಿಂತಿರುವುದು ಇವರ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕಾಂಗ್ರೆಸ್ ಸರಕಾರ 2015ರ ಆಗಸ್ಟ್ 31ರಂದು ಮೂರು ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಗಲಭೆ ನಡೆದಾಗ ಪ್ರತಿಭಟನಾಕಾರರು ಕಾಂಗ್ರೆಸ್ ಶಾಸಕ ಮಾಂಗಾ ವೈಫೆ ಅವರ ಮನೆಗೆ ಬೆಂಕಿ ಹಚ್ಚಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ಟಿ.ಟಿ.ಹೋಕಿಪ್ ಎದುರು ಹೆಂಗ್ಲೆಪ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಇದೇ ಗಲಭೆಯಲ್ಲಿ ಇನ್ನೋರ್ವ ಕಾಂಗ್ರೆಸ್ ಶಾಸಕ ವಿ.ವಾಲ್ತೆ ಅವರ ಮನೆಗೂ ಬೆಂಕಿ ಹಚ್ಚಲಾಗಿತ್ತು. ವಾಲ್ತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೆದುರು ಥನ್ಲೋನ್ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ಮೂವರು ಪ್ರಮುಖ ನಾಯಕರಾದ ಬಿಸ್ವಜಿತ್ ಸಿಂಗ್, ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಚವೊಬಾ ಸಿಂಗ್, ಪಕ್ಷದ ವಕ್ತಾರ ಎಂ.ಅಸ್ನಿ ಕುಮಾರ್ ಚುನಾವಣೆಯಲ್ಲಿ ಸೋಲುಂಡಿರುವುದು ಗಮನಾರ್ಹವಾಗಿದೆ. ಒಂದು ವೇಳೆ ಬಿಜೆಪಿ, ಇತರರ ಬೆಂಬಲದಿಂದ ಬಹುಮತಕ್ಕೆ ಅಗತ್ಯವಿರುವ 31 ಸ್ಥಾನಗಳನ್ನು ತಲುಪಲು ಸಾಧ್ಯವಾದರೆ ಆಗ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆ ಎದುರಾಗುತ್ತದೆ. ತಾನು ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯಲ್ಲ ಎಂದು ಚುನಾವಣೆಯ ಸಂದರ್ಭ ಪಕ್ಷದ ರಾಜ್ಯ ಘಟಕಾಧ್ಯಕ್ಷ ಭಬಾನಂದ ಸಿಂಗ್ ತಿಳಿಸಿದ್ದರು.

ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿಯ ಪ್ರಮುಖರಲ್ಲಿ- ಚಿಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ವೋರ್ಡ್ ವಶುಂ, ಉಖ್ರುಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೊಮತಾಯ್ ಶೈಝಾ, ತಬೂಬಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫ್ರಾನ್ಸಿಸ್ ನಜೊಪ, ತಮೈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿಕೊಂಬೊ ನೆವ್‌ಮೈ ಸೇರಿದ್ದಾರೆ.

ಚುನಾವಣೆಯಲ್ಲಿ ಸೋಲುಂಡಿರುವ ಮತ್ತೋರ್ವ ಪ್ರಮುಖರೆಂದರೆ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ . ಚುನಾವಣೆಗೆ ಒಂದು ತಿಂಗಳಿರುವಾಗ-ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಪಾರ್ಟಿ- ಎಂಬ ಪಕ್ಷ ಸ್ಥಾಪಿಸಿದ್ದ ಶರ್ಮಿಳಾ, ಪಕ್ಷದಿಂದ ಮೂವರನ್ನು ಕಣಕ್ಕಿಳಿಸಿದ್ದರು. ಆದರೆ ಮೂವರೂ ಸೋತಿರುವುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News