×
Ad

ಉ.ಪ್ರ:ನೂತನ ಶಾಸಕರಲ್ಲಿ 322 ಕೋಟಿಪತಿಗಳು, 143 ಕ್ರಿಮಿನಲ್ ಪ್ರಕರಣಗಳ ಸರದಾರರು

Update: 2017-03-12 23:17 IST

ಹೊಸದಿಲ್ಲಿ,ಮಾ.12: ಉತ್ತರ ಪ್ರದೇಶ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕರಲ್ಲಿ 322 ಕೋಟಿಪತಿಗಳಿದ್ದರೆ, 143 ಜನರ ವಿರುದ್ಧ ಕೊಲೆ ಸೇರಿದಂತೆ ಕ್ರಿಮಿನಲ್ ಪ್ರಕರಣಗಳಿವೆ.

ನ್ಯಾಷನಲ್ ಇಲೆಕ್ಷನ್ ವಾಚ್‌ನ ವರದಿಯಂತೆ ಗೊಂಡಾ ಜಿಲ್ಲೆಯ ಕರ್ನಲ್‌ಗಂಜ್‌ನ ಅಜಯ್ ಪ್ರತಾಪ ಸಿಂಗ್ (ಬಿಜೆಪಿ) ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ಕೃಷಿಕನೆಂದು ಘೋಷಿಸಿಕೊಂಡಿರುವ ಸಿಂಗ್ 49 ಕೋ.ರೂ.ಗೂ ಅಧಿಕ ವೌಲ್ಯದ ಆಸ್ತಿ ಹೊಂದಿದ್ದಾರೆ. ಇದರಲ್ಲಿ 60 ಕೆ.ಜಿ.ಚಿನ್ನ,ಏಳು ವಾಹನಗಳು,ಸಿಂಗ್ ಮತ್ತು ಅವರ ಪತ್ನಿಯ ಹೆಸರುಗಳಲ್ಲಿ ತಲಾ ಮೂರು ಗನ್‌ಗಳು ಸೇರಿವೆ.

 ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿರುವ 143 ಶಾಸಕರ ಪೈಕಿ 107 ಜನರು ಕೊಲೆ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳಂತಹ ಗಂಭೀರ ಆರೋಪಗಳನ್ನು ಹೊತ್ತಿದ್ದಾರೆ. ಮಾವು ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಮಾಫಿಯಾ ಡಾನ್-ರಾಜಕಾರಣಿ ಬಿಎಸ್‌ಪಿಯ ಮುಖ್ತಾರ್ ಅನ್ಸಾರಿ (ಬಿಎಸ್‌ಪಿ) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 16 ಕ್ರಿಮಿನಲ್ ಪ್ರಕರಣಗಳಲ್ಲಿ ಐದು ಕೊಲೆಗಳು ಸೇರಿವೆ.

ನೂತನ ಶಾಸಕರ ಪೈಕಿ ಮಹಿಳೆಯರ ಸಂಖ್ಯೆ ಕೇವಲ 40 ಆಗಿದೆ. ಸುಮಾರು ಶೇ.72ರಷ್ಟು ಅಥವಾ 290 ಶಾಸಕರು ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News