ಬಿ.ಸಿ.ರೋಡ್ ಹಳೆ ತಾಪಂ ಜಮೀನಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣ: ಸಚಿವ ರೈ

Update: 2017-03-13 18:33 GMT

ಬಂಟ್ವಾಳ, ಮಾ.13: ಬಿ.ಸಿ.ರೋಡ್‌ನ ತಾಲೂಕು ಪಂಚಾಯತ್‌ನ ಹಳೆ ಕಟ್ಟಡ ಹಾಗೂ ಉಪ ನೋಂದಣಿ ಕಚೇರಿಯನ್ನು ತೆರವುಗೊಳಿಸಿ ನಾಗರಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲು ಸರ್ವೇ ಕಾರ್ಯವನ್ನು ನಡೆಸಿ ಎರಡು ತಿಂಗಳೊಳಗಾಗಿ ವರದಿ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಹಶೀಲ್ದಾರ್ ಪುರಂದರ ಹೆಗ್ಡೆಗೆ ನಿರ್ದೇಶಿಸಿದರು. ಬಿ.ಸಿ.ರೋಡು ತಾಪಂ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆೆಯಲ್ಲಿ ಅವರು ಮಾತನಾಡುತ್ತಿದ್ದರು.

ಅಲ್ಲದೇ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕೆಡಿಪಿ ಸಭೆೆಯ ಬಳಿಕ ಸಚಿವ ರಮಾನಾಥ ರೈ ಮಂಗಳೂರು ಸಹಾಯಕ ಕಮಿಷನರ್ ರೇಣುಕಾಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಇಒ ಸಿಪ್ರಿಯಾನ್ ಮಿರಾಂದ ಸಹಿತ ಗುತ್ತಿಗೆದಾರರೊಂದಿಗೆ ವಿಶೇಷ ಸಭೆೆ ನಡೆಸಿದರು. ಹಕ್ಕುಪತ್ರ: ತಾಲೂಕಿನಲ್ಲಿ 94‘ಸಿ’ ಅಡಿಯಲ್ಲಿ 17,600 ಅರ್ಜಿಗಳು ಬಂದಿದ್ದು ಈ ಪೈಕಿ 9,841 ಅರ್ಜಿಗಳನ್ನು ಇತ್ಯರ್ಥಪಡಿಸಿ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದ ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ವಿಲೇವಾರಿಗೆ ಬಾಕಿಯಾಗಿದೆ ಎಂದು ಸಚಿವರ ಪ್ರಶ್ನೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ಉತ್ತರಿಸಿದರು. 

ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು ಇದರಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಲಾಗಿದೆ. ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೂಡಾ ಸಂಪೂರ್ಣ ಹಂತಕ್ಕೆ ತಲುಪಿದೆ ಎಂದು ಜಿಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದರು.

ಬಂಟ್ವಾಳ ನೂರು ಹಾಸಿಗೆಯ ಸಮುದಾಯ ಆರೋಗ್ಯ ಆಸ್ಪತ್ರೆಯ ಕಾಮಗಾರಿ ಮುಂದಿನ ವಾರ ಸಂಪೂರ್ಣಗೊಳ್ಳಲಿದೆ ಎಂದ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ತಾಲೂಕಿನಲ್ಲಿ ದಡಾರ-ರುಬೆಲ್ಲಾ ಕಾರ್ಯಕ್ರಮ ಶೇ.98ರಷ್ಟು ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ತಾಲೂಕಿನಲ್ಲಿ ವೈದ್ಯಾಧಿಕಾರಿಗಳ ಕೊರೆತೆಯಿಲ್ಲ. ಪ್ರತೀ ಆರೋಗ್ಯ ಕೇಂದ್ರಕ್ಕೂ ವೈದ್ಯಾಧಿಕಾರಿಗಳನ್ನು ನೇಮಕಮಾಡಲಾಗಿದೆ ಎಂದರು. ಬಂಟ್ವಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಏನೇನು ಬೇಕು ಎಂಬ ಕುರಿತು ವರದಿ ಸಲ್ಲಿಸುವಂತೆ ಸಚಿವ ರೈ ಪುರಸಭೆ ಮುಖ್ಯಾಧಿಕಾರಿ ಸುಧಾಕರ್‌ಗೆ ಸೂಚಿಸಿದರು. ದೇವರಾಜ ಅರಸು ಭವನ ನಿರ್ಮಾಣ, ಎಆರ್‌ಟಿಒ ಕಚೇರಿ, ಮೋರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸುವಂತೆಯೂ ಅವರು ತಹಶೀಲ್ದಾರ್‌ಗೆ ಸೂಚಿಸಿದರು. ಜಿಪಂ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರಾಜೇಶ್ ಬಾಳೆಕಲ್ಲು, ಉಮೇಶ್ ಬೋಳಂತೂರು, ಅಬ್ದುಲ್ಲಾ ಚರ್ಚೆಯಲ್ಲಿ ಪಾಲ್ಗೊಂಡರು.

ಈ ಸಂದರ್ಭ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಉಪಸ್ಥಿತರಿದ್ದರು.

ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು. ತಾಪಂ ಇಒ ಸಿಪ್ರಿಯಾನ್ ಮಿರಾಂದ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News