ಮಹಾರಾಷ್ಟ್ರಕ್ಕೆ ಹೊಸ ಮುಖ್ಯಮಂತ್ರಿ ?

Update: 2017-03-14 11:36 GMT

ಹೊಸದಿಲ್ಲಿ,ಮಾ.14: ರಕ್ಷಣಾ ಸಚಿವರಾಗಿದ್ದ ಮನೋಹರ ಪಾರಿಕ್ಕರ್ ಅವರು ಗೋವಾದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ತವರು ರಾಜ್ಯಕ್ಕೆ ಮರಳಿರು ವುದರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಡ್ತಿಯನ್ನು ಪಡೆದು ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಳ್ಳಬಹುದು ಎಂಬ ವದಂತಿಗಳು ಹರಿದಾ ಡುತ್ತಿವೆ.

ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿರುವ ಮಾತುಗಳನ್ನು ನಂಬಬಹುದಾದರೆ ಫಡ್ನವೀಸ್ ಕೇಂದ್ರಕ್ಕೆ ಭಡ್ತಿ ಪಡೆಯಬಹುದು ಮತ್ತು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಬಹುದು ಎಂದು ಪ್ರಮುಖ ದೈನಿಕವೊಂದು ವರದಿ ಮಾಡಿದೆ.

ಆದರೆ ಫಡ್ನವೀಸ್ ಕೇಂದ್ರದಲ್ಲಿ ಯಾವ ಖಾತೆ ಪಡೆಯಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ಕಳೆದ ಎರಡು ವರ್ಷಗಳಲ್ಲಿ ಫಡ್ನವೀಸ ಗಣನೀಯ ಸಾಧನೆಯನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರೂ ಅವರ ಕಾರ್ಯಗಳಿಂದ ಪ್ರಭಾವಿತರಾಗಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಪೌರಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ರಾಜ್ಯಾದ್ಯಂತ ಹೆಚ್ಚಿನ ಮಹಾನಗರ ಪಾಲಿಕೆಗಳಲ್ಲಿ ತನ್ನ ಆಧಿಪತ್ಯವನ್ನು ಸಾಧಿಸಿದ್ದು, ಬೃಹನ್ಮುಂಬೈ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆಯನ್ನು ಕೆಲವೇ ಸ್ಥಾನಗಳಿಂದ ತಪ್ಪಿಸಿಕೊಂಡಿದೆ.

ತನ್ಮಧ್ಯೆ ಪಾಟೀಲ್ ಅವರು,ಸದ್ಯದ ಸಚಿವ ಹುದ್ದೆಯಲ್ಲಿಯೇ ಸಂತೋಷವಾಗಿದ್ದೇನೆ ಮತ್ತು ಇಂತಹ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News