ಭರಾರ ಉಚ್ಚಾಟನೆ ‘ಸ್ಥಾಪಿತ ಆಡಳಿತ ವಿಧಾನ’: ಶ್ವೇತಭವನ

Update: 2017-03-14 14:18 GMT

ವಾಶಿಂಗ್ಟನ್, ಮಾ. 14: ಭಾರತ ಸಂಜಾತ ಪ್ರಾಸಿಕ್ಯೂಟರ್ ಪ್ರೀತ್ ಭರಾರ ಅವರನ್ನು ಹುದ್ದೆಯಿಂದ ಉಚ್ಚಾಟಿಸಿರುವುದು ಹಾಗೂ 45 ಇತರ ಅಟಾರ್ನಿಗಳಿಂದ ರಾಜೀನಾಮೆ ಪಡೆದಿರುವ ಕ್ರಮವನ್ನು ಶ್ವೇತಭವನ ಸಮರ್ಥಿಸಿದೆ. ಅದು ‘ಸ್ಥಾಪಿತ ಆಡಳಿತ ವಿಧಾನ’ವಾಗಿದೆ ಎಂದು ಅದು ಹೇಳಿದೆ.

‘‘ಈ ಸಮಯದಲ್ಲಿ ಅಮೆರಿಕದ ಆಡಳಿತವು ಹಿಂದಿನ ಆಡಳಿತದಿಂದ ನೇಮಕಗೊಂಡಿರುವ ಎಲ್ಲ ಅಟಾರ್ನಿಗಳ ರಾಜೀನಾಮೆಯನ್ನು ಕೇಳುವುದು ಸ್ಥಾಪಿತ ಆಡಳಿತ ವಿಧನವಾಗಿದೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ತನ್ನ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ರಾಜೀನಾಮೆ ನೀಡಲು ನಿರಾಕರಿಸಿದ ಪ್ರೀತ್ ಭರಾರ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಸರಕಾರದ ಕ್ರಮದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.

ಹಿಂದಿನ ಒಬಾಮ ಆಡಳಿತದಿಂದ ನೇಮಿಸಲ್ಪಟ್ಟ 46 ಅಟಾರ್ನಿಗಳು ರಾಜೀನಾಮೆ ನೀಡಬೇಕೆಂದು ಅಮೆರಿಕದ ಕಾನೂನು ಇಲಾಖೆ ಸೂಚನೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಅವರ ಪೈಕಿ ಹೆಚ್ಚಿನವರು ಈಗಾಗಲೇ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. ಈವರೆಗೆ ರಾಜೀನಾಮೆ ಸಲ್ಲಿಸದವರಿಂದ ಈಗ ಕೊನೆಯದಾಗಿ ರಾಜೀನಾಮೆಗಳನ್ನು ಕೇಳತ್ತಿದ್ದೇವೆ. ಆದರೆ, ಇದು ಹೆಚ್ಚಿನ ಆಡಳಿತಗಳ ಸಾಮಾನ್ಯ ಕ್ರಮವಾಗಿದೆ’’ ಎಂದು ಸ್ಪೈಸರ್ ನುಡಿದರು.

‘‘ಧನ್ಯವಾದ ಹೇಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭರಾರ ಅವರಿಗೆ ಕರೆ ಮಾಡಿದ್ದಾರೆ. ಇದು ಹೆಚ್ಚಿನ ಆಡಳಿತಗಳಲ್ಲಿ ನಡೆಯುವ ಸಾಮಾನ್ಯ ಕ್ರಮವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News