ತೆರಿಗೆ ಪಾಲನೆ ಹೆಚ್ಚಿದರೆ ಮಾತ್ರ ನೋಟು ಅಮಾನ್ಯ ಯಶಸ್ವಿ : ಸಿಇಎ

Update: 2017-03-14 14:34 GMT

ಕೊಚ್ಚಿ,ಮಾ.14: ಚಲಾವಣೆಯಲ್ಲಿರುವ ಕರೆನ್ಸಿ ಪ್ರಮಾಣ ತಗ್ಗಿದರೆ ಮತ್ತು ತೆರಿಗೆ ಪಾಲನೆಯಲ್ಲಿ ಏರಿಕೆಯಾದರೆ ಮಾತ್ರ ನೋಟು ಅಮಾನ್ಯ ಕ್ರಮವು ಯಶಸ್ವಿಯಾಗಿದೆ ಎಂದು ಪರಿಗಣಿಸಬಹುದಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ)ಅರವಿಂದ ಸುಬ್ರಮಣಿಯನ್ ಹೇಳಿದ್ದಾರೆ.

ಸೋಮವಾರ ರಾತ್ರಿ ಇಲ್ಲಿ ಸಮ್ಮೇಳನವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ನೋಟು ಅಮಾನ್ಯ ಕ್ರಮಕ್ಕೆ ಮುನ್ನ ನಗದು-ಜಿಡಿಪಿ ಅನುಪಾತ ಸುಮಾರು ಶೇ.12ರಷ್ಟಿತ್ತು. ನೋಟು ಅಮಾನ್ಯ ಯಶಸ್ವಿ ಎಂದು ಪರಿಗಣಿಸಬೇಕಾದರೆ ಕಾಲಕ್ರಮೇಣ ಈ ಅನುಪಾತ ಕಡಿಮೆಯಾಗಬೇಕು ಎಂದರು.

ನೋಟು ಅಮಾನ್ಯ ಕ್ರಮದಿಂದ ಲಾಭಗಳಿವೆ ಎಂದು ಒತ್ತಿ ಹೇಳಿದ ಅವರು, ಆರ್ಥಿಕತೆಯಲ್ಲಿನ ನಗದು ಚಲಾವಣೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ ಎಂದರು.

ನೋಟು ಅಮಾನ್ಯ ಕ್ರಮ ಯಶಸ್ವಿಯಾಗಿದೆ ಎಂದು ಪರಿಗಣಿಸಬೇಕಾದರೆ ತೆರಿಗೆದಾತರ ಸಂಖ್ಯೆ ಹೆಚ್ಚುವ ಅಗತ್ಯವಿದೆ ಎಂದು ಅವರು ಹೇಳಿದರು.

ನೋಟು ಅಮಾನ್ಯ ಕ್ರಮವು ಆಡಳಿತ ಕ್ರಮದಲ್ಲಿ ಬದಲಾವಣೆಯ ಸೂಚನೆಯಾಗಿದೆ ಎಂದ ಸುಬ್ರಮಣಿಯನ್,ಇದರ ಪರಿಣಾಮವಾಗಿ ತೆರಿಗೆ ಪಾಲನೆಯೂ ಏರಿಕೆಯಾಗಬೇಕಿದೆ ಎಂದರು.

ಡಿಜಿಟಲ್ ಪಾವತಿ ಕುರಿತು ಮಾತನಾಡಿದ ಅವರು, ಸ್ಮಾರ್ಟ್‌ಫೋನ್ ಅಥವಾ ಫೀಚರ್ ಪೋನ್‌ಗಳನ್ನು ಹೊಂದಿರದ 35 ಮಿಲಿಯ ಜನರು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಗಮನ ಹರಿಸಬೇಕಾಗಿದೆ ಎಂದರು. ದೇಶವು ನಗದು ಆಧಾರಿತವಾಗಿದೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇಂತಹವರ ಮೇಲೆ ಹೇರುವಂತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News