ಶತ್ರು ಆಸ್ತಿ ಮಸೂದೆಗೆ ಸಂಸತ್ತಿನ ಅಂಗೀಕಾರ
Update: 2017-03-14 21:56 IST
ಹೊಸದಿಲ್ಲಿ,ಮಾ.14: 49 ವರ್ಷಗಳಷ್ಟು ಹಳೆಯ ಕಾನೂನಿಗೆ ತಿದ್ದುಪಡಿಯನ್ನು ತರುವ ಮಸೂದೆಯೊಂದನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ. ಇದರೊಂದಿಗೆ ವಿಭಜನೆಯ ವೇಳೆ ಪಾಕಿಸ್ತಾನ ಮತ್ತು ಚೀನಾಕ್ಕೆ ವಲಸೆ ಹೋಗಿದ್ದವರ ವಾರಸುದಾರರು ಅವರು ಭಾರತದಲ್ಲಿ ಬಿಟ್ಟು ಹೋದ ಆಸ್ತಿಗಳ ಮೇಲಿನ ಹಕ್ಕು ಕಳೆದುಕೊಂಡಿದ್ದಾರೆ.
ರಾಜ್ಯಸಭೆಯು ಕಳೆದ ವಾರ ಸೂಚಿಸಿದ್ದ ತಿದ್ದುಪಡಿಗಳನ್ನೊಳಗೊಂಡ,1968ರ ಶತ್ರು ಆಸ್ತಿ ಕಾಯ್ದೆಯನ್ನು ತಿದ್ದುಪಡಿಗೊಳಿಸುವ ಶತ್ರು ಆಸ್ತಿ(ತಿದ್ದುಪಡಿ ಮತ್ತು ಸ್ಥಿರೀಕರಣ) ಮಸೂದೆ,2016 ಅನ್ನು ಲೋಕಸಭೆಯು ಧ್ವನಿಮತದೊಂದಿಗೆ ಅಂಗೀಕರಿಸಿತು.
ಲೋಕಸಭೆಯು ಈ ಹಿಂದೆಯೇ ಮಸೂದೆಯನ್ನು ಅಂಗೀಕರಿಸಿತ್ತು. ಆದರೆ ಆಯ್ಕೆ ಸಮಿತಿಯೊಂದರ ಶಿಫಾರಸುಗಳ ಮೇರೆಗೆ ರಾಜ್ಯಸಭೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಂಡಿಸಲಾಗಿತ್ತು. ಅವುಗಳನ್ನು ಲೋಕಸಭೆಯು ಒಪ್ಪಿಕೊಳ್ಳಬೇಕಾಗಿತ್ತು. ಇಂದು ಆ ಪ್ರಕ್ರಿಯೆ ಪೂರ್ಣಗೊಂಡು ಮಸೂದೆಯು ಅಂಗೀಕಾರಗೊಂಡಿದೆ.