×
Ad

ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ಮಾಡಿದವನಿಗೆ ಬಿಜೆಪಿ ವಕ್ತಾರನ ಹುದ್ದೆ

Update: 2017-03-15 16:52 IST

ಹೊಸದಿಲ್ಲಿ, ಮಾ. 15 : ದೇಶದ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಿಜೆಪಿ ವಕ್ತಾರನಾಗಿ ನೇಮಿಸಿದೆ. ತೇಜಿಂದರ್ ಪಾಲ್ ಬಗ್ಗ ಅವರನ್ನು ದಿಲ್ಲಿ ಬಿಜೆಪಿಯ ವಕ್ತಾರನಾಗಿ ನೇಮಿಸಲಾಗಿದೆ. 

ಇದಕ್ಕಾಗಿ ಅವರಿಗೆ ಕೇಂದ್ರ ಸಚಿವ ಸುರೇಶ ಪ್ರಭು ಸಹಿತ ಹಲವು ಬಿಜೆಪಿ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ತನ್ನ ನೇಮಕದ ಕುರಿತು ಟ್ವಿಟ್ಟರ್ ನಲ್ಲಿ ಹೇಳಿರುವ ಬಗ್ಗ ತನ್ನ ಮೇಲೆ ವಿಶ್ವಾಸ ಇತ್ತು ನೇಮಕ ಮಾಡಿರುವುದಕ್ಕೆ ಪ್ರಧಾನಿ ಮೋದಿ ,ಪಕ್ಷಾಧ್ಯಕ್ಷ ಅಮಿತ್ ಶಾ, ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ  ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ . 

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಬಗ್ಗ  12 ಅಕ್ಟೊಬರ್ 2011 ರಂದು ತಾನು ಸುಪ್ರೀಂ ಕೋರ್ಟ್ ನ ಪ್ರಶಾಂತ್ ಭೂಷಣ್ ಅವರ ಕಚೇರಿಯಲ್ಲೇ ಅವರ ಮೇಲೆ ಹಲ್ಲೆ ನಡೆಸಿದ್ದನ್ನು ಘೋಷಿಸಿಕೊಂಡಿದ್ದರು. ಕಾಶ್ಮೀರ ಕುರಿತ ಭೂಷಣ್ ಅವರ ಹೇಳಿಕೆಯ ನೆಪದಲ್ಲಿ ಈ ಹಲ್ಲೆ ನಡೆಸಲಾಗಿತ್ತು. ಅದಕ್ಕಾಗಿ ತಿಹಾರ್ ಜೈಲಿಗೂ ಹೋಗಿದ್ದರು. 

ಬಗ್ಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿ ಇರುವವರು. ಬಿಜೆಪಿಯಲ್ಲಿ ಈ ಹಿಂದೆಯೇ ಇದ್ದ ಬಗ್ಗ ನಡುವೆ ಪಕ್ಷ ಬಿಟ್ಟಿದ್ದರು. ದೇಶವಿರೋಧಿ ಹೇಳಿಕೆ ನೀಡುವವರು / ಕೃತ್ಯಗಳಲ್ಲಿ ತೊಡಗುವವರನ್ನು " ನೋಡಿಕೊಳ್ಳಲು" ಪಕ್ಷದಲ್ಲಿದ್ದರೆ ಕಷ್ಟವಾಗುತ್ತದೆ. ಪ್ರತಿಯೊಂದಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಬಿಟ್ಟೆ  ಎಂದು ಹೇಳಿದ್ದರು. ಮತ್ತೆ ಭಗತ್ ಸಿಂಗ್ ಹೆಸರಲ್ಲಿ ಸಂಘಟನೆಯೊಂದನ್ನು ಕಟ್ಟಿಕೊಂಡು ದೇಶವಿರೋಧಿ ಹೇಳಿಕೆ ನೀಡುವವರನ್ನು ರಕ್ತದ ಹೋಳಿಯಲ್ಲಿ ಆಡಿಸುತ್ತೇವೆ ಎಂದು ಹೇಳಿದ್ದರು. 

ತೇಜಿಂದರ್  ರನ್ನು ಪ್ರಧಾನಿ ಈ ಹಿಂದೆ ತನ್ನ ಕಚೇರಿಯಲ್ಲಿ ಭೇಟಿಯಾಗಿದ್ದರು. ಇದೀಗ ಅವರಿಗೆ ವಕ್ತಾರ ಹುದ್ದೆ ನೀಡಲಾಗಿದೆ. 

ತನ್ನ ಪ್ರಚೋದನಕಾರಿ ಟ್ವೀಟ್ ಗಳನ್ನು ಬಗ್ಗ ಬಳಿಕ ಡಿಲೀಟ್ ಮಾಡಿದ್ದರು. ಆದರೆ ಔಟ್ ಲುಕ್ ನಿಯತಕಾಲಿಕ ಈ ಟ್ವೀಟ್ ಗಳನ್ನು ಸಂಗ್ರಹಿಸಿತ್ತು. ಈ ಟ್ವೀಟ್ ಗಳು ಇಲ್ಲಿವೆ. ಹಲ್ಲೆ ಕೃತ್ಯವನ್ನು ಬೇಕಾದರೆ ಮುಂದೆಯೂ ಮಾಡುತ್ತೇನೆ ಎಂಬ ಮಾತುಗಳೂ ಇದರಲ್ಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News