ಐಸಿಸಿ ಚೇರ್ಮನ್ ಹುದ್ದೆ ತ್ಯಜಿಸಿದ ಶಶಾಂಕ್ ಮನೋಹರ್
ದುಬೈ,ಮಾ.15: ಅತ್ಯಂತ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶಶಾಂಕ್ ಮನೋಹರ್ ಐಸಿಸಿ ಚೇರ್ಮನ್ ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಕಳೆದ 8 ತಿಂಗಳಿಂದ ಐಸಿಸಿ ಚೇರ್ಮನ್ ಆಗಿ ಕಾರ್ಯನಿರ್ವಹಿಸಿರುವ ನಾಗ್ಪುರದ ವಕೀಲ ಮನೋಹರ್ ವೈಯಕ್ತಿಕ ಕಾರಣ ನೀಡಿ ಪ್ರತಿಷ್ಠಿತ ಹುದ್ದೆಯನ್ನು ತ್ಯಜಿಸಿದ್ದಾರೆ.
59ರ ಹರೆಯದ ಮನೋಹರ್ ಐಸಿಸಿ ಸಿಇಒ ಡೇವ್ ರಿಚರ್ಡ್‌ಸನ್‌ಗೆ ಇ-ಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಎರಡು ವರ್ಷಗಳ ಅಧಿಕಾರದ ಅವಧಿ ಕೊನೆಗೊಳ್ಳುವ ಮೊದಲೇ ಮನೋಹರ್ ದಿಢೀರನೆ ಈ ನಿರ್ಧಾರ ಕೈಗೊಳ್ಳಲು ನಿರ್ದಿಷ್ಟ ಕಾರಣವೇನೆಂದು ಪತ್ರದಲ್ಲಿ ಸ್ಪಷ್ಟಪಡಿಸಿಲ್ಲ.
ವಿಶ್ವದ ಮೂರು ಬಲಾಢ್ಯ ಕ್ರಿಕೆಟ್ ಮಂಡಳಿಗಳಾದ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಐಸಿಸಿಯ ಆದಾಯದಲ್ಲಿ ಸಿಂಹಪಾಲು ಪಡೆಯುತ್ತಿದ್ದವು. ಶ್ರೀನಿವಾಸನ್ ಐಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಿಗ್‌ತ್ರಿ ಪದ್ದತಿಯನ್ನು ಜಾರಿಗೆ ತಂದಿದ್ದರು.
ಕಳೆದ ಫೆಬ್ರವರಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಐಸಿಸಿ ಆದಾಯ ಹಂಚಿಕೆ ಮಾದರಿಯಲ್ಲಿ ಸುಧಾರಣೆ ತರಲು ಪ್ರಸ್ತಾವ ಸಲ್ಲಿಸಲಾಗಿದ್ದು, ಈ ಪ್ರಸ್ತಾವಕ್ಕೆ ಮನೋಹರ್ ಕೂಡ ಆರಂಭದಿಂದ ಬೆಂಬಲ ವ್ಯಕ್ತಪಡಿಸಿದ್ದರು. ಎಪ್ರಿಲ್‌ನಲ್ಲಿ ನಡೆಯಲಿರುವ ಐಸಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಇದೀಗ ಐಸಿಸಿ ಚೇರ್ಮನ್ ಹುದ್ದೆಗೆ ರಾಜೀನಾಮೆ ನೀಡಿರುವ ಮನೋಹರ್ ಐಸಿಸಿ ಪ್ರಮುಖ ಸಭೆಗೆ ಹಾಜರಾಗುವುದರಿಂದ ತಪ್ಪಿಸಿಕೊಂಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಐಸಿಸಿ ಆದಾಯ ಹಂಚಿಕೆಯ ಮಾದರಿಯಲ್ಲಿ ಬದಲಾವಣೆಯಾದರೆ ಬಿಸಿಸಿಐಗೆ ತೀವ್ರ ಹಿನ್ನಡೆಯಾಗಲಿದ್ದು, ಕಳೆದ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಪ್ರತಿನಿಧಿಸಿದ್ದ ಆಡಳಿತಾಧಿಕಾರಿ ಸಮಿತಿಯ ಸದಸ್ಯ ವಿಕ್ರಂ ಲಿಮಾಯೆ ಐಸಿಸಿ ಹೊಸ ಸುಧಾರಣೆ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
‘‘ನಾನು ಕಳೆದ ವರ್ಷ ಅವಿರೋಧವಾಗಿ ಮೊದಲ ಸ್ವತಂತ್ರ ಐಸಿಸಿ ಚೇರ್ಮನ್ ಆಗಿ ಆಯ್ಕೆಯಾಗಿದ್ದೆ. ಉತ್ತಮ ಕೆಲಸ ಮಾಡಲು ಪ್ರಯತ್ನಪಟ್ಟಿದ್ದೇನೆ. ಮಂಡಳಿಯ ಕಾರ್ಯನಿರ್ವಹಣೆಯ ವೇಳೆ ಕೆಲವೊಂದು ವಿಷಯದ ಬಗ್ಗೆ ನ್ಯಾಯೋಚಿತ ಹಾಗೂ ತಾರತಮ್ಯರಹಿತ ನಿರ್ಧಾರ ಕೈಗೊಳ್ಳಲು ಪ್ರಯತ್ನಿಸಿದ್ದೇನೆ. ವೈಯಕ್ತಿಕ ಕಾರಣದಿಂದ ಐಸಿಸಿ ಚೇರ್ಮನ್ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ಚೇರ್ಮನ್ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದೇನೆ’’ ಎಂದು ರಾಜೀನಾಮೆ ಪತ್ರದಲ್ಲಿ ಮನೋಹರ್ ಸ್ಪಷ್ಟಪಡಿಸಿದ್ದಾರೆ.
‘‘ತುಂಬು ಹೃದಯದಿಂದ ಬೆಂಬಲ ನೀಡಿರುವ ಐಸಿಸಿಯ ಎಲ್ಲ ನಿರ್ದೇಶಕರು, ಆಡಳಿತ ವರ್ಗ ಹಾಗೂ ಸಿಬ್ಬಂದಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಐಸಿಸಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸುವೆ’’ ಎಂದು ಮನೋಹರ್ ತಿಳಿಸಿದ್ದಾರೆ.
ಲೋಧಾ ಸಮಿತಿಯ ಸುಧಾರಣೆಗಳನ್ನು ಜಾರಿಗೆ ಅಸಮರ್ಥರಾಗಿ ಮನೋಹರ್ ಕಳೆದ ವರ್ಷ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮನೋಹರ್ ಮುಳುಗುವ ಹಡಗನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಸೇರಿದ್ದಾರೆ ಎಂದು ಮನೋಹರ್ಗೆ ಟೀಕಾಕಾರರು ವಾಗ್ದಾಳಿ ನಡೆಸಿದ್ದರು.