ವಿಮಾನದಲ್ಲಿ ಹೆಡ್‌ಫೋನ್ ಬ್ಯಾಟರಿ ಸ್ಫೋಟ
ಸಿಡ್ನಿ (ಆಸ್ಟ್ರೇಲಿಯ), ಮಾ. 15: ಬೀಜಿಂಗ್‌ನಿಂದ ಮೆಲ್ಬರ್ನ್‌ಗೆ ಮಹಿಳೆಯೊಬ್ಬರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಹೆಡ್‌ಫೋನ್‌ಗೆ ಬೆಂಕಿ ಹತ್ತಿಕೊಂಡಿದ್ದು, ಅವರ ಮುಖ ಮತ್ತು ಕೈಗಳಿಗೆ ಗಾಯವಾಗಿರುವ ಘಟನೆ ವರದಿಯಾಗಿದೆ.ಈ ಘಟನೆಯು ವಿಮಾನ ಪ್ರಯಾಣದ ವೇಳೆ ಬ್ಯಾಟರಿ ಚಾಲಿತ ಸಾಧನಗಳನ್ನು ಬಳಸುವ ಅಪಾಯಗಳ ಬಗ್ಗೆ ಬೆಟ್ಟು ಮಾಡಿದೆ.
ಫೆಬ್ರವರಿ 19ರಂದು ಆಸ್ಟ್ರೇಲಿಯಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕ ಮಹಿಳೆಯು ತನ್ನ ಆಸನದಲ್ಲಿ ಒರಗಿ ಬ್ಯಾಟರಿ ಚಾಲಿತ ಹೆಡ್‌ಫೋನ್ ಮೂಲಕ ಹಾಡುಗಳನ್ನು ಕೇಳುತ್ತಿದ್ದರು. ಆಗ ದೊಡ್ಡ ಸ್ಫೋಟದ ಸದ್ದು ಕೇಳಿಸಿತು.
‘‘ನಾನು ತಿರುಗಲು ಯತ್ನಿಸಿದಾಗ ಮುಖ ಉರಿಯುತ್ತಿದ್ದ ಅನುಭವ ನನಗಾಯಿತು’’ ಎಂದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಆಸ್ಟ್ರೇಲಿಯ ಸಾರಿಗೆ ಸುರಕ್ಷಾ ಸಂಸ್ಥೆ (ಎಟಿಎಸ್‌ಬಿ)ಗೆ ಅವರು ಹೇಳಿದರು.
‘‘ನಾನು ನನ್ನ ಮುಖವನ್ನು ಹಿಡಿದುಕೊಂಡೆ. ಆಗ ಹೆಡ್‌ಫೋನ್ ನನ್ನ ಕತ್ತನ್ನು ಆವರಿಸಿತು. ಆಗಲೂ ಉರಿಯ ಅನುಭವ ನನಗಾಯಿತು. ಆಗ ನಾನು ಹೆಡ್‌ಫೋನನ್ನು ತೆಗೆದು ನೆಲದ ಮೇಲೆ ಬಿಸಾಡಿದೆ’’ ಎಂದರು.
ಆಗ ಹೆಡ್‌ಫೋನ್‌ನಲ್ಲಿ ಬೆಂಕಿಯ ಕಿಡಿಗಳಿದ್ದವು. ಗಗನಸಖಿಯರು ಧಾವಿಸಿ ಅದರ ಮೇಲೆ ಬಾಲ್ದಿಯಿಂದ ನೀರು ಚೆಲ್ಲಿದರು.ಮಹಿಳೆಯ ಕಪ್ಪಾಗಿರುವ ಮುಖ ಮತ್ತು ಕತ್ತು ಹಾಗೂ ಕೈಗಳಲ್ಲಿ ಗುಳ್ಳೆಗಳು ಚಿತ್ರದಲ್ಲಿ ಕಾಣಿಸುತ್ತವೆ.
ಹೆಡ್‌ಫೋನ್‌ನಲ್ಲಿದ್ದ ಲಿಥಿಯಮ್-ಅಯಾನ್ ಬ್ಯಾಟರಿಗಳು ಬೆಂಕಿಗೆ ಕಾರಣವಾಗಿರಬಹುದು ಎಂಬುದಾಗಿ ಸಾರಿಗೆ ಸುರಕ್ಷಾ ಬ್ಯೂರೊ ಅಂದಾಜಿಸಿದೆ.
ವಿಮಾನಗಳಲ್ಲಿ ಬ್ಯಾಟರಿಗಳಿಗೆ ಬೆಂಕಿ ಹತ್ತಿಕೊಳ್ಳುವ ವಿದ್ಯಮಾನ ವಿಮಾನ ಪ್ರಯಾಣದ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆ ಮೊಬೈಲ್ ಬ್ಯಾಟರಿಗಳಿಗೆ ಬೆಂಕಿ ಹತ್ತಿಕೊಂಡಿದ್ದ ಘಟನೆಗಳು ನಡೆದಿರುವುದನ್ನು ಸ್ಮರಿಸಬಹುದಾಗಿದೆ.