ಕೊಟ್ಟೇ ಇಲ್ಲದ ಫತ್ವಾದ ಬಗ್ಗೆ ಅಂತಾರಾಷ್ಟ್ರೀಯ ವಿವಾದ !
ಗುವಾಹಟಿ,ಮಾ.15: ರಾಷ್ಟ್ರಮಟ್ಟದ ರಿಯಾಲಿಟಿ ಶೋ ಗಾಯಕಿ,ಬಾಲಿವುಡ್ ಗಾಯಕಿ ನಹೀದ್ ಆಫ್ರೀನ್ ವಿರುದ್ಧ ಕೆಲವು ಇಸ್ಲಾಂ ಧರ್ಮಗುರುಗಳು ಫತ್ವಾ ಹೊರಡಿಸಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಕಪೋಲಕಲ್ಪಿತವೆಂಬುದು ಇದೀಗ ದೃಢಪಟ್ಟಿದೆ.
ಅಸ್ಸಾಂನ ಹೊಜೈ ಜಿಲ್ಲೆಯ ಲಂಕಾ ಎಂಬಲ್ಲಿರುವ ಉಡಾಲಿ ಸೊನೈ ಬೀಬಿ ಕಾಲೇಜ್‌ನಲ್ಲಿ ಮಾರ್ಚ್ 25ರಂದು ನಡೆಯಲಿರುವ ರಸಮಂಜರಿ ಕಾರ್ಯಕ್ರಮದಲ್ಲಿ ಅಫ್ರೀನ್ ಅವರ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ‘ಈ ಕಾರ್ಯಕ್ರಮವು ಶರಿಯಾಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕರು ಅದರಲ್ಲಿ ಭಾಗವಹಿಸಕೂಡದು’ ಎಂದು ಕರೆ ನೀಡುವ ಕರಪತ್ರಗಳನ್ನು ಹಂಚಲಾಗಿತ್ತೆನ್ನಲಾಗಿದೆ. ಆದಾಗ್ಯೂ ಕರಪತ್ರದಲ್ಲಿ ಆಫ್ರೀನ್‌ರ ಹೆಸರನ್ನು ಕೂಡಾ ಉಲ್ಲೇಖಿಸಿಲ್ಲ. ‘‘ಮಸೀದಿಗಳು, ಈದ್ಗಾಗಳು, ಮದ್ರಸಾಗಳು ಹಾಗೂ ದಫನಭೂಮಿಗಳಿಂದ ಸುತ್ತುವರಿಯಲ್ಪಟ್ಟ ಮೈದಾನಗಳಲ್ಲಿ ಸಂಗೀತರಸಮಂಜರಿ ಕಾರ್ಯಕ್ರಮಗಳಂತಹ ಶರಿಯಾ ವಿರೋಧಿ ಚಟುವಟಿಕೆಗಳನ್ನು ನಡೆಸಿದಲ್ಲಿ ನಮ್ಮ ಮುಂದಿನ ತಲೆಮಾರು ಅಲ್ಲಾಹುವಿನ ಕೋಪಕ್ಕೆ ತುತ್ತಾಗಲಿದೆ’’ ಎಂದು ಕರಪತ್ರದಲ್ಲಿ ಹೇಳಲಾಗಿತ್ತು.
ಅಸ್ಸಾಂನ ಜಮಿಯತ್ ಉಲೇಮಾದ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಮದ್ರಸಾಗಳ ಬೋಧಕರು ಸೇರಿದಂತೆ 46 ಮಂದಿ ಧಾರ್ಮಿಕ ಪಂಡಿತರು ಈ ಕರಪತ್ರಕ್ಕೆ ಸಹಿಹಾಕಿದ್ದರೆನ್ನಲಾಗಿದೆ.
ಆದರೆ ತನ್ನ ವಿರುದ್ಧ ಫತ್ವಾ ಜಾರಿಗೊಳಿಸಲಾಗಿದೆಯೆಂಬ ವರದಿಗಳನ್ನು ಸ್ವತಃ ಆಫ್ರೀನ್ ನಿರಾಕರಿಸಿದ್ದಾರೆ. ತನಗೆ ಆ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಆಕೆ ಸ್ಪಷ್ಟಪಡಿಸಿದ್ದಾರೆ. ಕೆಲವು ಪತ್ರಕರ್ತರು ತನ್ನ ತಂದೆಗೆ ಸೋಮವಾರ ರಾತ್ರಿ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದರು ಎಂದು ಆಕೆ ತಿಳಿಸಿದ್ದಾರೆ.
ಈ ಮದ್ಯೆ ಅಸ್ಸಾಂ ರಾಜ್ಯ ಜಮಿಯತ್ ಉಲೇಮಾದ ಕಾರ್ಯದರ್ಶಿ ವೌಲವಿ ಫಝ್ಲುಲ್ ಕರೀಂ ಖಾಸಿಮಿ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಮಾ.25ರ ರಸಮಂಜರಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಯಾವುದೇ ಫತ್ವಾ ಹೊರಡಿಸಲಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮವೊಂದು ಹರಡಿದ ತಪ್ಪುಮಾಹಿತಿ ಇದಾಗಿದೆಯೆಂದು ಅವರು ಆಪಾದಿಸಿದ್ದಾರೆ.ಕೇವಲ ಚೂರು ಕಾಗದದ ಮೂಲಕ ಫತ್ವಾ ಹೊರಡಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ರಸಮಂಜರಿಯನ್ನು ಆಯೋಜಿಸಲಾಗಿರುವ ಸ್ಥಳವು ಧಾರ್ಮಿಕ ಹಾಗೂ ಶಿಕ್ಷಣಸಂಸ್ಥೆಗಳಿಗೆ ಅತ್ಯಂತ ಸನಿಹದಲ್ಲಿದ್ದು, ಇಂತಹ ಪ್ರದರ್ಶನಳಲ್ಲಿ ಕೆಲವರು ಗಲಾಟೆ ಎಬ್ಬಿಸುವ ಸಾಧ್ಯತೆಗಳಿರುತ್ತವೆ ಎಂದವರು ಹೇಳಿದ್ದಾರೆ. ಅಲ್ಲದೆ, ಈ ಹಿಂದೆ ಇಂತಹ ಕಾರ್ಯಕ್ರಮಗಳಿಗೆ ಕೆಲವರು ಕುಡಿದುಬಂದು,ಶಾಂತಿಯನ್ನು ಕದಡಿದ ನಿದರ್ಶನಗಳೂ ಇವೆಯೆಂದು ಅವರು ಹೇಳಿದ್ದಾರೆ.
ರಿಯಾಲಿಟಿ ಸಂಗೀತ ಶೋದಲ್ಲಿ ಗಾಯಕಿ ಆಫ್ರೀನ್‌ರ ಸಾಧನೆ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಹೆಮ್ಮೆಯಿದೆಯೆಂದು ಹೇಳಿದ ವೌಲ್ವಿ ಅವರು, ವಿವಾದಿತ ನೋಟಿಸ್‌ನಲ್ಲಿ ಆಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲವೆಂದು ಹೇಳಿದ್ದಾರೆ. ಆದರೆ ಕೆಲವರಿಗೆ ಸಂಗೀತ ರಸಮಂಜರಿಗೆ ಆಯ್ದುಕೊಳ್ಳಲಾದ ಸ್ಥಳದ ಬಗ್ಗೆ ಆಕ್ಷೇಪಗಳಿರಬಹುದು ಎಂದವರು ಹೇಳಿದ್ದಾರೆ.