ಇವಿಎಂಗಳಲ್ಲಿ ಅಕ್ರಮ ನಡೆಸಲು ಸಾಧ್ಯವೇ...?

Update: 2017-03-15 16:18 GMT

ಹೊಸದಿಲ್ಲಿ,ಮಾ.15: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಳಸಲಾದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರು ಆರೋಪಿಸಿದ ಬಳಿಕ ಇದೀಗ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ(ಆಪ್)ಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ ಅವರು, ಪಂಜಾಬ್ ಚುನಾವಣೆಗಳಲ್ಲಿ ಇವಿಎಂಗಳಲ್ಲಿ ದಾಖಲಾದ ಶೇ.20-30ರಷ್ಟು ಮತಗಳು ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟಕ್ಕೆ ವರ್ಗಾವಣೆಯಾಗಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಆಗಾಗ್ಗೆ ಶಂಕೆಗಳು ವ್ಯಕ್ತವಾಗುತ್ತಲೇ ಇವೆ. ಮತದಾನದ ದಾಖಲೆಯಾಗಿ ಇವಿಎಂಗಳಲ್ಲಿ ಹಂತಹಂತವಾಗಿ ಮುದ್ರಿತ ಚೀಟಿ ಲಭ್ಯತೆ (ವಿವಿಪಿಎಟಿ) ವ್ಯವಸ್ಥೆಯನ್ನು ಅಳವಡಿಸುವಂತೆ ಸರ್ವೋಚ್ಚ ನ್ಯಾಯಾಲಯವು 2013ರಲ್ಲಿಯೇ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿತ್ತು. ಆಡಳಿತ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ರಾಜಕಾರಣಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಇವಿಎಂಗಳ ಬಗ್ಗೆ ಶಂಕೆಗಳನ್ನು ಎತ್ತುತ್ತಲೇ ಬಂದಿದ್ದಾರೆ.

ಇವಿಎಂಗಳಲ್ಲಿ ಅಕ್ರಮ ಹೇಗೆ?

ಬ್ಲೂ ಟೂಥ್ ಸಂಪರ್ಕ ಹೊಂದಿರುವ ಪುಟ್ಟ ಚಿಪ್‌ವೊಂದನ್ನು ಇವಿಎಂನಲ್ಲಿ ತೂರಿಸಬಹುದಾಗಿದೆ ಮತ್ತು ಮತದಾನ ನಡೆಯುತ್ತಿರುವಾಗ ಮೊಬೈಲ್ ಫೋನ್ ಮೂಲಕ ಈ ಚಿಪ್‌ನ್ನು ನಿಯಂತ್ರಿಸಿ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದಾಗಿದೆ.

ಆದರೆ ಇದೇಕೆ ಸಾಧ್ಯವಿಲ್ಲ ?

ಆದರೆ ಇಂತಹ ಪುಟ್ಟ ಚಿಪ್‌ಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿರುವ ಇವಿಎಂಗಳಲ್ಲಿ ಸೇರಿಸುವುದು ಅಸಾಧ್ಯವೇ ಸರಿ. ಅಲ್ಲದೆ ಈ ಬಗೆಯ ಅಕ್ರಮವನ್ನು ನಡೆಸಲು ವಿವಿಧ ಕೇಂದ್ರ ಮತ್ತು ರಾಜ್ಯ ಸರಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಸಾವಿರಾರು ಜನರನ್ನು ತೊಡಗಿಸಿಕೊಳ್ಳಬೇಕಾಗುತ್ತದೆ ಮತ್ತು ಇಂತಹ ಸಾಹಸ ಅಕ್ರಮವನ್ನ್ನು ಸುಲಭವಾಗಿ ಬಯಲುಗೊಳಿಸುತ್ತದೆ.

ಇವಿಎಂಗಳ ಹ್ಯಾಕಿಂಗ್ ಸಾಧ್ಯವೇ?

ಸಾಕಷ್ಟು ಸುರಕ್ಷತೆಗಳನ್ನು ಹೊಂದಿರುವ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡುತ್ತಿರುವಾಗ ಇವಿಎಂ ಹ್ಯಾಕಿಂಗ್ ಏಕೆ ಸಾಧ್ಯವಿಲ್ಲ ಎಂದು ಬಹಳಷ್ಟು ಜನರು ಹೇಳುತ್ತಾರೆ. ಹ್ಯಾಕ್ ಮಾಡಬೇಕಾದರೆ ಇಂಟರ್‌ನೆಟ್ ಸಂಪರ್ಕ ಬೇಕು ಮತ್ತು ಇವಿಎಂಗಳು ಇಂಟರ್‌ನೆಟ್ ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ ಇವಿಎಂಗಳಲ್ಲಿ ಹ್ಯಾಕಿಂಗ್ ಸಾಧ್ಯವೇ ಇಲ್ಲ.

ಇವಿಎಂ ಸುರಕ್ಷತೆ ಶೇ.100ರಷ್ಟು ವಿಶ್ವಾಸಪಾತ್ರವೇ?

ಇಲ್ಲ. ಪ್ರತಿ ಇವಿಎಂ ಕೂಡ ಅಕ್ರಮಗಳನ್ನು ನಡೆಸಲು ಅಥವಾ ದೋಷಯುಕ್ತ ವಾಗಿರುವ ಎಲ್ಲ ಸಂಭವನೀಯತೆಯನ್ನು ಹೊಂದಿರುತ್ತದೆ. ಆದರೆ ಬೇಕಾದ ರೀತಿಯಲ್ಲಿ ಫಲಿತಾಂಶ ಬರುವಂತೆ ಮಾಡಲು ಸಾವಿರಾರು ಮತಯಂತ್ರಗಳಲ್ಲಿ ಕೈವಾಡ ನಡೆಸುವುದು ಪ್ರಾಯೋಗಿಕವಾಗಿ ಅಸಾಧ್ಯ ಎಂದೇ ಹೇಳಬಹುದು.

ವಿವಿಪಿಎಟಿ ಎಂದರೇನು?

ವಿವಿಪಿಎಟಿ ಅಥವಾ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ ಅನ್ನು ಸರಳವಾಗಿ ತನ್ನ ಮತ ತಾನು ಬಯಸಿದ್ದ ಅಭ್ಯರ್ಥಿಗೇ ಬಿದ್ದಿದೆ ಎಂದು ಮತದಾರನು ಖಚಿತಪಡಿಸಿಕೊಳ್ಳಬಹುದಾದ ಮತದಾನದ ಮುದ್ರಿತ ರಸೀದಿ ಎಂದು ಹೇಳಬಹುದು. ಇವಿಎಂಗಳ ಬಗ್ಗೆ ಶಂಕೆಗಳನ್ನು ನಿವಾರಿಸಲು ವಿವಿಪಿಎಟಿ ಒಂದು ಸಾಧನವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದೂ ಕೂಡ ಸಂಪೂರ್ಣ ದೋಷಮುಕ್ತ ವ್ಯವಸ್ಥೆಯಲ್ಲ. ಇದೂ ಇವಿಎಂನಂತೆ ಕೆಲವು ಅಪಾಯಗಳಿಗೆ ತೆರೆದುಕೊಳ್ಳಬಹುದು.                                              

ಕೃಪೆ: ಇಕನಾಮಿಕ್ ಟೈಮ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News