ಜೆಎನ್‌ಯು ಕನ್ನಡ ಭಾಷಾ ಪೀಠಕ್ಕೆ 5 ಕೋಟಿ ರೂ. ಸ್ವಾಗತಾರ್ಹ: ಪುರುಷೋತ್ತಮ ಬಿಳಿಮಲೆ

Update: 2017-03-15 16:50 GMT

ಕರ್ನಾಟಕ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ 2015 ನವೆಂಬರ್‌ನಲ್ಲಿ ಕನ್ನಡ ಭಾಷಾ ಪೀಠವನ್ನು ಸ್ಥಾಪಿಸಿತ್ತು. ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಅದ್ಯಯನ ಪೀಠವು ಈಗಾಗಲೇ ಸುಸಜ್ಜಿತವಾದ ಸಂಶೋಧನಾ ಗ್ರಂಥಾಲಯವನ್ನು ಸ್ಥಾಪಿಸಿದ್ದಲ್ಲದೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಫಿಲ್ ಮತ್ತು ಪಿಎಚ್‌ಡಿ ಅಧ್ಯಯನವನ್ನು ಆರಂಭಿಸಲಿದೆ.

ಈ ನಡುವೆ ಕನ್ನಡ-ಕರ್ನಾಟಕದ ಕುರಿತು ಅತ್ಯಂತ ಮಹತ್ವದ ರಾಷ್ಟ್ರೀಯ ವಿಚಾರ ಸಂಕಿರಣಗಳು, ಕರ್ನಾಟಕದ ಜನಪದ ಕಲೆಗಳ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿದ ಪೀಠವು, ಭಾರತದ ಇತರ ಭಾಷೆಗಳ ಪೀಠಗಳು ಜೆಎನ್‌ಯುವಿನಲ್ಲಿ ಆರಂಭವಾಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

ಇಷ್ಟಿದ್ದರೂ ವಾರ್ಷಿಕ ಅನುದಾನದ ಮೇಲೆ ನಡೆಯುವ ಈ ಪೀಠದ ಭವಿಷ್ಯದ ಕುರಿತು ಆತಂಕ ನೆಲೆಸಿತ್ತು. ಈ ಆತಂಕವನ್ನು ದೂರ ಮಾಡಿದ ಸರಕಾರವು 2017ರ ಆಯವ್ಯಯದಲ್ಲಿ 5 ಕೋಟಿ ರೂಪಾಯಿಗಳು ಮೂಲಧನವನ್ನು ಪೀಠಕ್ಕೆ ಒದಗಿಸುವುದರ ಮೂಲಕ ಪೀಠದ ಭವಿಷ್ಯವನ್ನು ಭದ್ರಗೊಳಿಸಿದೆ. 

ಈ ಹಣವನ್ನು ಮೂಲಧನವನ್ನಾಗಿರಿಸಿ ಇದರಿಂದ ಬರುವ ಬಡ್ಡಿಯಿಂದ ಪೀಠದ ಚಟುವಟಿಕೆಗಳನ್ನು ನಿರಾತಂಕವಾಗಿ ನಡೆಸಲು ಸಾಧ್ಯವಾಗಿದೆ. ಇದಕ್ಕೆ ಕಾರಣಕರ್ತರಾದ ಕರ್ನಾಟಕ ಸರಕಾರದ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರನ್ನೂ, ಸಂಸ್ಕೃತಿ ಇಲಾಖೆ ಸಚಿವೆ ಶ್ರೀಮತಿ ಉಮಾಶ್ರೀ ಅವರನ್ನೂ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ ಅವರನ್ನೂ ಕನ್ನಡ ಪೀಠ ಅತ್ಯಂತ ಗೌರವಪೂರ್ವಕವಾಗಿ ಅಭಿನಂದಿಸಿ, ತನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

- ಪುರುಷೋತ್ತಮ ಬಿಳಿಮಲೆ, 
ಅಧ್ಯಕ್ಷ ಹಾಗೂ ಪ್ರಾಧ್ಯಾಪಕ 
ಕನ್ನಡ ಭಾಷಾ ಪೀಠ
ಜವಾಹರಲಲಾಲ ನೆಹರೂ ವಿಶ್ವವಿದ್ಯಾಲಯದ 
ನವದೆಹಲಿ-110067

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News