ಮೋದಿಯಿಂದ ಮಧ್ಯಪ್ರದೇಶ, ಛತ್ತೀಸ್‌ಗಢ ಸಿಎಂಗಳ ರೆಕ್ಕೆಗೆ ಕತ್ತರಿ?

Update: 2017-03-15 18:29 GMT

ಭೋಪಾಲ,ಮಾ.15: ದೇಶದ ಮುಂದಿನ ರಕ್ಷಣಾ ಸಚಿವನಾಗುವ ಸಾಧ್ಯತೆಯಲ್ಲಿ ತಾನು ದಿಲ್ಲಿಗೆ ತೆರಳುತ್ತಿದ್ದೇನೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನಿರಾಕರಿಸಿದ್ದಾರೆ.

  ಮಂಗಳವಾರ ರಾತ್ರಿ ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ವೌನವೇ ಚೌಹಾಣ್ ಅವರ ಉತ್ತರವಾಗಿತ್ತು. ಮನೋಹರ ಪಾರಿಕ್ಕರ್ ಅವರು ಗೋವಾದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಅವರು ಕೇಂದ್ರದಲ್ಲಿ ಹೊಂದಿದ್ದ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ ಈಗ ವಿತ್ತಸಚಿವ ಅರುಣ್ ಜೇಟ್ಲಿಯವರ ಹೆಗಲಿಗೇರಿದೆ.

ಆದರೆ ಇವೆಲ್ಲ ‘ಹೋಳಿ ವದಂತಿ ’ಗಳೆಂದು ತಳ್ಳಿ ಹಾಕಿರುವ ಹಿರಿಯ ಬಿಜೆಪಿ ನಾಯಕ ಡಾ.ಹಿತೇಶ್ ಬಾಜಪೈ ಅವರು, ಪಕ್ಷವು ಚೌಹಾಣ್ ಅವರ ನೇತೃತ್ವದಲ್ಲಿಯೇ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಮತ್ತು ರಕ್ಷಣಾ ಸಚಿವ ಸ್ಥಾನಕ್ಕೆ ಪಾರಿಕ್ಕರ್ ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ಚೌಹಾಣ್ ಅವರು ಮುಂದಿನ ರಕ್ಷಣಾ ಸಚಿವರಾಗಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬಹುದು ಎಂಬ ವದಂತಿಗಳು ಇಲ್ಲಿಯ ರಾಜಕೀಯ ಮತ್ತು ಅಧಿಕಾರಿ ವಲಯಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೆಲವು ಸುದ್ದಿ ಜಾಲತಾಣಗಳು ಮೂಲಗಳನ್ನು ಉಲ್ಲೇಖಿಸಿ ಈ ವದಂತಿಗಳಿಗೆ ಇನ್ನಷ್ಟು ಕಾವು ನೀಡಿವೆ.

ಇಂತಹ ವದಂತಿ ಹರಿದಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆಗಳಿಗೆ ಮೊದಲು ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಇನ್ನಷ್ಟು ಬಲಿಷ್ಠರಾಗುತ್ತಾರೆ ಮತ್ತು ಚೌಹಾಣ್ ಹಾಗೂ ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ ಸಿಂಗ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲರಾಗಬೇಕೆಂದು ಅವರು ಬಯಸಿರುವುದರಿಂದ ಅವರಲ್ಲಿ ಯಾರನ್ನಾದರೂ ಕೇಂದ್ರಕ್ಕೆ ಕರೆಸಿಕೊಳ್ಳಬಹುದು ಎಂಬ ವದಂತಿಗಳಿದ್ದವು.

 2017,ನ.28 ಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ 12 ವರ್ಷಗಳನ್ನು ಪೂರೈಸಲಿರುವ ಚೌಹಾಣ್ ಅವರು 2018ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆ ಗೆಲುವು ತಂದುಕೊಟ್ಟರೆ ನಾಲ್ಕನೇ ಅವಧಿಗೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರು ಈಗಾಗಲೇ ರಾಜ್ಯವನ್ನು ಸುದೀರ್ಘ ಅವಧಿಗೆ ಆಳಿದ ಮುಖ್ಯಮಂತ್ರಿಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೌಹಾಣ್ ಈವರೆಗೆ ತನ್ನ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ಮತ್ತು ಡಂಪರ್ ಹಗರಣ,ವ್ಯಾಪಂ ಹಗರಣ, ಅಕ್ರಮ ಗಣಿಗಾರಿಕೆ ಇತ್ಯಾದಿಗಳೊಂದಿಗೆ ನಂಟು ಹೊಂದಿರುವ ಆರೋಪಗಳಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ 2014ರ ಚುನಾವಣೆಗಳ ಬಳಿಕ ಆಡ್ವಾಣಿಯವರು ಮೂಲೆಗುಂಪಾಗಿ ಮೋದಿ-ಅಮಿತ್ ಶಾ ಜೋಡಿ ಬಲಿಷ್ಠಗೊಂಡ ಬಳಿಕ ಚೌಹಾಣ್ ಅವರಿಗೆ ರಾಜಕೀಯ ಬದುಕು ಮೊದಲಿನಂತೆ ಸುಗಮವಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚೌಹಾಣ್ ಅವರ ಕಡುವೈರಿ ಕೈಲಾಷ್ ವಿಜಯ ವರ್ಗೀಯ ಅವರು ಶಾ ಅವರ ನಿಕಟವರ್ತಿಯಾಗಿರುವುದು ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವುದು ಅವರಿಗೆ ಇರುಸುಮುರುಸು ಉಂಟುಮಾಡಿದೆ ಎನ್ನಲಾಗುತ್ತಿದೆ.

 ಚೌಹಾಣ್ ಅವರನ್ನು ಕೇಂದ್ರಕ್ಕೆ ವರ್ಗಾಯಿಸುವುದಿದ್ದರೆ ಇದೇ ಸಕಾಲ ಎಂದು ಪಕ್ಷದ ಮೂಲಗಳು ಹೇಳಿವೆ. 2018ರಲ್ಲಿ ಅವರು ಪಕ್ಷದ ಗೆಲುವಿನಲ್ಲಿ ಮುಂಚೂಣಿಯಲ್ಲಿದ್ದರೆ ಮತ್ತು ಈ ಗೆಲುವಿನ ಸಾಧ್ಯತೆಯೂ ಇರುವುದರಿಂದ ನಂತರ ಅವರನ್ನು ಎತ್ತಂಗಡಿ ಮಾಡುವುದು ಮೋದಿ-ಶಾ ಜೋಡಿಗೆ ಕಷ್ಟವಾಗಲಿದೆ ಎಂದು ಅವು ಅಭಿಪ್ರಾಯ ವ್ಯಕ್ತಪಡಿಸಿವೆ.

ಅಧಿಕಾರಿಗಳು ಹೇಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿ ಯಲ್ಲಿದ್ದಾರೆ. ಮ.ಪ್ರ.ಬಿಜೆಪಿ ಮಾಜಿ ಅಧ್ಯಕ್ಷರಾಗಿರುವ ತೋಮರ್ ಮೋದಿ ಮತ್ತು ಚೌಹಾಣ್ ಅವರ ಆಪ್ತರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News