ಮೂಡುಬಿದಿರೆ ತಾಲೂಕು ಘೋಷಣೆ: ವ್ಯಾಪಕ ಶ್ಲಾಘನೆ

Update: 2017-03-15 18:54 GMT

ಮೂಡುಬಿದಿರೆ, ಮಾ.15: ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಈ ಸಾಲಿನ ಸರಕಾರದ ಕೊನೆ ಬಜೆಟ್‌ನಲ್ಲಿ ಮೂಡುಬಿದಿರೆಯನ್ನು ತಾಲೂಕನ್ನಾಗಿ ಘೋಷಿಸಿದ್ದು, ಈ ಯಶಸ್ಸಿನ ಹಿಂದೆ ಸಾಕಷ್ಟು ಕೆಲಸ ಮಾಡಿದ್ದ ಶಾಸಕ ಅಭಯಚಂದ್ರ ಅವರ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 

ಮೂಡುಬಿದಿರೆ ತಾಲೂಕಾಗಬೇಕೆಂದು ಹೋರಾಟ ಮಾಡಿದವರಲ್ಲಿ ಹಲವು ಜನಪ್ರತಿನಿಗಳು ಸೇರಿದ್ದಾರೆ. ಅವರಲ್ಲಿ ಪ್ರಮುಖರಾದವರು ದಿವಂಗತ ಶಿರ್ತಾಡಿ ಧರ್ಮಸಾಮ್ರಾಜ್ಯ. ಬ್ರಹ್ಮಾವರ ಕ್ಷೇತ್ರವನ್ನು 40 ವರ್ಷಗಳ ಹಿಂದೆ ಶಾಸಕನಾಗಿ ಪ್ರತಿನಿಸಿದ್ದ ಅವರು ಮೂಲತಃ ಈಗಿನ ಮೂಡುಬಿದಿರೆ ಹೋಬಳಿಯ ಶಿರ್ತಾಡಿಯವರು. ಆ ಸಮಯದಲ್ಲಿಯೇ ಮೂಡುಬಿದಿರೆ ತಾಲೂಕಾಗಬೇಕೆಂದು ಒತ್ತಾಸೆಯಿತ್ತು. ಈ ಸಂಬಂಧ ಅವರು ಸಾಕಷ್ಟು ಶ್ರಮಿಸಿದ್ದರು ಕೂಡಾ.

ಆನಂತರದಲ್ಲಿ ಅಮರನಾಥ ಶೆಟ್ಟಿ ತಾಲೂಕು ರಚನೆಯ ಹೋರಾಟವನ್ನು ಕೈಗೆತ್ತಿಕೊಂಡಿದ್ದರು. 1994-99ರ ಅವಯಲ್ಲಿ ಮೂಡುಬಿದಿರೆ ಶಾಸಕರಾಗಿದ್ದ ಅಮರನಾಥ ಶೆಟ್ಟಿ ತಮ್ಮದೇ ಪಕ್ಷ ಆಡಳಿತದಲ್ಲಿದ್ದರಿಂದ ತಾಲೂಕು ರಚಿಸುವಂತೆ ಒತ್ತಡ ಹೇರಿದ್ದರು. 1997ರಲ್ಲಿ ಅವಿಭಜಿತ ದ.ಕ. ಜಿಲ್ಲೆ ಇಬ್ಭಾಗವಾದಾಗ ಕಾರ್ಕಳ ತಾಲೂಕಿನಲ್ಲಿದ್ದ ಮೂಡುಬಿದಿರೆ ಹೋಬಳಿಯು ಪ್ರತ್ಯೇಕವಾಗಿ ದ.ಕ. ಜಿಲ್ಲೆಯಲ್ಲಿ ಉಳಿದುಕೊಂಡಿತು. ಜಿಲ್ಲೆ ಇಬ್ಭಾಗವಾಯಿತಾದರೂ ಮೂಡುಬಿದಿರೆಯ ಜನತೆಗೆ ಇದು ಪೂರಕವೇನೂ ಆಗಲಿಲ್ಲ. ಆಗಿನ ತಾಲೂಕು ಪುನರ್ ವಿಂಗಡನೆ ವರದಿಗಾಗಿ ನಿಯೋಜಿಸಲಾಗಿದ್ದ ಗದ್ದಿ ಗೌಡರ್ ಸಮಿತಿಯ ಶಿಾರಸಿನಂತೆ ದ.ಕ. ಜಿಲ್ಲೆಯಿಂದ ಉಡುಪಿ ವಿಂಗಡನೆಯಾದಾಗ ಮೂಡುಬಿದಿರೆಯನ್ನು ಒಂದು ತಾಲೂಕಾಗಿ ಘೋಷಿಸಬೇಕಿತ್ತು.

ಆದರೆ ಸರಕಾರದ ಇಚ್ಛಾಶಕ್ತಿ ಕೊರತೆಯಿಂದ ಆಗಿರಲಿಲ್ಲ. ಈ ಬಗ್ಗೆ ಗದ್ದಿ ಗೌಡರ್ ಸಮಿತಿಯೂ ಪ್ರತಿಕ್ರಿಯಿಸಿ ಮುಲ್ಕಿ, ಮೂಡುಬಿದಿರೆ, ವೇಣೂರು ಹೋಬಳಿಗಳನ್ನು ಒಂದಾಗಿಸಿ ಹೊಸ ತಾಲೂಕು ರಚಿಸದೇ ಜಿಲ್ಲೆ ವಿಂಗಡಿಸಿದ್ದರಲ್ಲಿ ಅರ್ಥವೇ ಇಲ್ಲ ಎಂದು ತಿಳಿಸಿತ್ತು. ಹಂದೇಕರ್ ಸಮಿತಿಯ ವರದಿಯು ಕೂಡಾ ಮೂಡುಬಿದಿರೆ ತಾಲೂಕಾಗಬೇಕೆಂದು ಶಿಾರಸು ಮಾಡಿತ್ತು. 1999ರಲ್ಲಿ ಆಗಿನ ದ.ಕ. ಜಿಪಂ ಮಂಗಳೂರು ನಗರ ಹಾಗೂ ಗ್ರಾಮಾಂತರ ಎಂಬ ಎರಡು ತಾಲೂಕು ರಚಿಸುವಂತೆ, ಗ್ರಾಮಾಂತರ ತಾಲೂಕಿನಲ್ಲಿ ಮೂಡುಬಿದಿರೆ, ಗುರುಪುರ, ವೇಣೂರು ಹೋಬಳಿಗಳನ್ನು ಸೇರಿಸುವಂತೆಯೂ ಪ್ರಸ್ತಾವನೆ ಕಳುಹಿಸಿದ್ದು, ಆನಂತರದ ದಿನಗಳಲ್ಲಿ ಅದು ಕೂಡಾ ನನೆಗುದಿಗೆ ಬಿದ್ದಿತ್ತು.

ಹೋಬಳಿ ಕೇಂದ್ರವಾಗಿದ್ದ ಮೂಡುಬಿದಿರೆಗೆ ಒಬ್ಬರು ವಿಶೇಷ ತಹಶೀಲ್ದಾರ್ ನೇಮಕ ಮಾಡಿ ತಕ್ಕಮಟ್ಟಿನ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದ್ದು, ಇದುವರೆಗೂ ಕೆಲವೊಂದು ಅನಿವಾರ್ಯ ಸಂದರ್ಭ ಹೊರತುಪಡಿಸಿ ತಾಲೂಕುಗಳಲ್ಲಿರುವ ಎಲ್ಲ ವ್ಯವಸ್ಥೆಯನ್ನು ಕಂದಾಯ ಇಲಾಖೆಯು ಮೂಡುಬಿದಿರೆಯಲ್ಲಿ ನಾಡಕಚೇರಿ ಮತ್ತು ವಿಶೇಷ ತಹಶೀಲ್ದಾರ್ ಕಚೇರಿಗಳಲ್ಲಿ ಅಳವಡಿಸಿಕೊಂಡಿದೆ. ಕಂದಾಯ ರಿಜಿಸ್ಟ್ರಾರ್ ಹಾಗೂ ತಾಲೂಕು ವ್ಯಾಪ್ತಿಯ ನ್ಯಾಯಾಲಯ ಇರುವುದರಿಂದ ಇದುವರೆಗೆ ದೊಡ್ಡಮಟ್ಟಿನ ಸಮಸ್ಯೆಯಿಂದ ಜನತೆ ಪಾರಾಗಿದ್ದರು. ಸರಕಾರ ಇದೀಗ ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾತ್ರವೇ ಮಾಡಿದ್ದು, ಅದರ ವಿಸ್ತೃತ ವರದಿಯಲ್ಲಿ ಯಾವೆಲ್ಲಾ ಗ್ರಾಮ ಹೋಬಳಿಗಳು ಸೇರ್ಪಡೆಯಾಗಲಿವೆ ಎನ್ನುವುದು ಹಾಗೂ ಹೊಸ ತಾಪಂ ರಚನೆಯಾಗಲಿದೇ ಎನ್ನುವುದೂ ಇನ್ನಷ್ಟೇ ತಿಳಿದುಬರಬೇಕಿದೆ. ನೂತನ ಎಪಿಎಂಸಿ ಹಾಗೂ ಎಪಿಎಂಸಿ ಮಾರುಕಟ್ಟೆ, ಎಲ್‌ಡಿ ಬ್ಯಾಂಕ್ ಸೌಲಭ್ಯ, ಮಿನಿವಿಧಾನ ಸೌಧ, ಪೂರ್ಣಾವ ತಹಶೀಲ್ದಾರ್ ಹಾಗೂ ಇತರ ಎಲ್ಲಾ ರೀತಿಯ ಕಂದಾಯ ಸಿಬ್ಬಂದಿ ಹಾಗೂ ಸರಕಾರದ ಎಲ್ಲಾ ನೂತನ ಯೋಜನೆಗಳು ಹೊಸ ತಾಲೂಕಿಗೆ ಲಭ್ಯವಾಗಲಿವೆ.

ಕಳೆದ ನಾಲ್ಕು ಸಾಲಿನಲ್ಲೂ ಮೂಡುಬಿದಿರೆ ಮುಲ್ಕಿ ಕ್ಷೇತ್ರಕ್ಕೆ ಶಾಸಕ ಅಭಯಚಂದ್ರ ಅವರ ಮೇಲೆ ತಾಲೂಕು ರಚನೆ ಮಾಡಬೇಕೆಂಬ ಸಾಕಷ್ಟು ಒತ್ತಡವಿತ್ತು. ಈ ಬಗ್ಗೆ ಅವರಿಗೂ ವಿಶೇಷ ಆಸಕ್ತಿಯಿತ್ತು. ಈ ಸರಕಾರದ ಆರಂಭದ ಬಜೆಟ್‌ನಿಂದಲೇ ತಾಲೂಕು ರಚನೆಯ ಪ್ರಸ್ತಾಪ ಬಂದಾಗಲೆಲ್ಲಾ ಸಾಕಷ್ಟು ಒತ್ತಡ ಹೇರಿದ್ದರು. ಕಳೆದ ಚುನಾವಣೆ ಸಂದರ್ಭ ಜನರಿಗೆ ಮೂಡುಬಿದಿರೆಯನ್ನು ತಾಲೂಕಾಗಿ ಮಾಡುತ್ತೇನೆ ಎಂಬ ಭರವಸೆಯನ್ನೂ ನೀಡಿದ್ದು, ಇದೀಗ ಆ ಭರವಸೆಯನ್ನು ಅವರು ಈಡೇರಿಸಿದಂತಾಗಿದೆ.

  • ತಾಲೂಕು ಘೋಷಣೆ: ಗಣ್ಯರ ಅಭಿಪ್ರಾಯ

ಮೂಡುಬಿದಿರೆಯನ್ನು ತಾಲೂಕಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವುದು ಖುಷಿ ನೀಡಿದೆ. ಮುಂದಿನ ಒಂದು ವರ್ಷದೊಳಗೆ ಮಿನಿವಿಧಾನ ಸೌಧ ನಿರ್ಮಾಣ ಮಾಡಿಕೊಡಲಾಗುವುದು.

*ಅಭಯಚಂದ್ರ ಜೈನ್, ಕ್ಷೇತ್ರದ ಶಾಸಕ

ಬಿಜೆಪಿ ಸರಕಾರ ಇರುವಾಗಲೇ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು. ರಾಜಕೀಯ ಕಾರಣಗಳಿಂದ ನಿಲುಗಡೆಯಾಗಿತ್ತು. ದ.ಕ. ಹಾಗೂ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ತಾಲೂಕು ರಚನೆ ವಿ.ಎಸ್. ಆಚಾರ್ಯರ ಕನಸಾಗಿತ್ತು. ತಾಲೂಕು ರಚನೆ ಅಭಿವೃದ್ಧಿಗೆ ಪೂರಕವಾಗಲಿ.

*ಕೆ.ಪಿ ಜಗದೀಶ್ ಅಕಾರಿ.

ತಡವಾದರೂ ಇದೀಗ ತಾಲೂಕು ಘೋಷಣೆ ಆಗಿರುವುದು ಸಂತಸ ತಂದಿದೆ. ಸರಕಾರ ಪೂರಕ ಸೂಕ್ತ ಅನುದಾನ ನೀಡಿ ಮೂಡುಬಿದಿರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕಿದೆ.

*ಕೆ.ಅಮರನಾಥ ಶೆಟ್ಟಿ, ಮಾಜಿ ಸಚಿವ.

ಹಿರಿಯರ, ವಿವಿಧ ಪಕ್ಷದ ರಾಜಕೀಯ ಮುಖಂಡರ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಸರಕಾರವು ಕೇವಲ ತಾಲೂಕು ಘೋಷಣೆಯನ್ನು ಮಾತ್ರ ಮಾಡಿದರೆ ಸಾಲದು ಎಲ್ಲಾ ಸವಲತ್ತುಗಳನ್ನೂ ನೀಡಬೇಕು. ಶಿಕ್ಷಣ ಸಾಹಿತ್ಯ, ಸಂಸ್ಕೃತಿ, ಕ್ರೀಡೆಯಲ್ಲಿ ಅದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

*ಡಾ.ಎಂ.ಮೋಹನ ಆಳ್ವ.

  • ಕಾಂಗ್ರೆಸ್‌ನಿಂದ ಸಂಭ್ರಮ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಮೂಡುಬಿದಿರೆಯನ್ನು ತಾಲೂಕಾಗಿ ಘೋಷಿಸಿದ್ದನ್ನು ಸಂಭ್ರಮಿಸಿ ಮೂಡುಬಿದಿರೆಯ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಶಾಸಕ ಅಭಯಚಂದ್ರ ಅವರ ನಿರಂತರ ಹೋರಾಟದ ಲಶ್ರುತಿ ಈಗಿನ ತಾಲೂಕು ಘೋಷಣೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ರಾಘು ಪೂಜಾರಿ, ಲಕ್ಷ್ಮಣ ಪೂಜಾರಿ, ಹರೀಶ್, ಸುಂದರ ಪೂಜಾರಿ, ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ೌಲ್ ಡಿಸೋಜ, ಪಿ.ಕೆ. ಥೋಮಸ್, ಇಕ್ಬಾಲ್ ಕರೀಮ್, ರುಕ್ಕಯ್ಯ ಪೂಜಾರಿ, ರತ್ನಾಕರ ದೇವಾಡಿಗ, ರತ್ನಾಕರ ಮೊಯ್ಲಿ ಮತ್ತಿತರರು ಉಪಸ್ಥಿತರಿದ್ದರು.

Writer - ಹಾರಿಸ್ ಹೊಸ್ಮಾರ್

contributor

Editor - ಹಾರಿಸ್ ಹೊಸ್ಮಾರ್

contributor

Similar News