2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭ

Update: 2017-03-16 14:10 GMT

ಹೊಸದಿಲ್ಲಿ, ಮಾ.16: ಯುವಜನರನ್ನು ಕೇಂದ್ರ ಸರಕಾರದ ಜನಕಲ್ಯಾಣ ಕಾರ್ಯಕ್ರಮ ಮತ್ತು ಉತ್ತಮ ಆಡಳಿತದ ರಾಯಭಾರಿಗಳನ್ನಾಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಮುಖಂಡರಿಗೆ ಕರೆ ನೀಡಿದ್ದಾರೆ.

  ಯುವಜನರನ್ನು ತಲುಪುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮೋದಿ ಹೇಳಿದರು. 2019ರ ಲೋಕಸಭಾ ಚುನಾವಣೆಗೆ ಈಗಿಂದೀಗಲೇ ಸಿದ್ಧತೆ ನಡೆಸುವ ಇರಾದೆಯೊಂದಿಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಮಾತನಾಡಿದರು.

  ದಲಿತರು ಈ ಬಾರಿಯ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ, ದಲಿತರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ಈ ಉಪಕ್ರಮಗಳಿಗೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ವಾರಾವಧಿಯ ಈ ಕಾರ್ಯಕ್ರಮಗಳನ್ನು ಪ್ರತೀ ಪಂಚಾಯತ್ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ನಡೆಸಲು ಮತ್ತು ಪಕ್ಷದ ಸ್ಥಾಪನಾ ದಿನವಾಗಿರುವ ಎಪ್ರಿಲ್ 6ರಂದು ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಲಾಯಿತು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಬಳಿಕ ಮುಂದಿನ ಲೋಕಸಭಾ ಚುನಾವಣೆ ಪಕ್ಷದ ಮುಂದಿರುವ ಬಹುದೊಡ್ಡ ಸವಾಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

 ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ನಡೆಯುತ್ತಿರುವ ಪ್ರಪ್ರಥಮ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸಾಧನೆಗೆ ಸಂತಸ ವ್ಯಕ್ತಪಡಿಸಿ ಇದಕ್ಕೆ ಕಾರಣಕರ್ತರಾದವರನ್ನು ಅಭಿನಂದಿಸಲಾಯಿತು ಹಾಗೂ ಪಕ್ಷದ ಮುಂದಿರುವ ಸವಾಲಿನ ಬಗ್ಗೆ ಚರ್ಚಿಸಲಾಯಿತು.

  ಜನರು ಡಿಜಿಟಲ್ ಪಾವತಿ ವ್ಯವಸ್ಥೆಯಾದ ಬಿಎಚ್‌ಐಎಂ(ಭೀಮ್) ಆ್ಯಪ್ ಬಳಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಉತ್ತೇಜನ ನೀಡುವಂತೆ ಪ್ರಧಾನಿ ಮೋದಿ ಪಕ್ಷದ ಮುಖಂಡರಿಗೆ ತಿಳಿಸಿದ್ದಾಗಿ ಸಭೆಯ ಬಳಿಕ ಸಂಸದೀಯ ವ್ಯವಹಾರ ಸಚಿವ ಅನಂತ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

      ಯುವಜನರು ಮಾಹಿತಿಗಾಗಿ ದಿನಪತ್ರಿಕೆ ಮತ್ತು ಟಿ.ವಿ ಚಾನೆಲ್‌ಗಿಂತ ಹೆಚ್ಚು ಮೊಬೈಲ್ ಫೋನ್ ಉಪಯೋಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಮಾಧ್ಯಮದ ಮೂಲಕ ಅವರನ್ನು ‘ಹಿಡಿಯಬೇಕು’. ದ್ವಿತೀಯ ಪಿಯುಸಿ ಹಂತದಲ್ಲೇ ಅವರನ್ನು ಸಂಪರ್ಕಿಸಬೇಕು ಎಂದು ಪಕ್ಷದ ಮುಖಂಡರಿಗೆ ತಿಳಿಸಿದರು. 2014ರ ಲೋಕಸಭಾ ಚುನಾವಣೆಯ ಬಳಿಕ ಇದೀಗ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪಕ್ಷಕ್ಕೆ ಇದಿರಾದ ಸವಾಲಾಗಿತ್ತು. 2019ರ ಲೋಕಸಭಾ ಚುನಾವಣೆ ಮತ್ತೊಂದು ಸವಾಲಾಗಿದ್ದು ಇದನ್ನೆದುರಿಸಲು ಸಿದ್ಧರಾಗುವಂತೆ ತಿಳಿಸಿದರು.

  ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸೂಚಿಸುವ ಹಾಗೂ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಕಾರ್ಯಕರ್ತರ ಪ್ರಯತ್ನಗಳನ್ನು ಅಭಿನಂದಿಸುವ ಗೊತ್ತುವಳಿಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಬಿಜೆಪಿಯು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಉತ್ತಮ ಆಡಳಿತ ನೀಡುತ್ತದೆ ಎಂದು ಗೊತ್ತುವಳಿಯಲ್ಲಿ ಆಶಯ ವ್ಯಕ್ತಪಡಿಸಲಾಗಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಗೊತ್ತುವಳಿ ಸೂಚಿಸಿದರು ಮತ್ತು ವಿತ್ತ ಸಚಿವ ಅರುಣ್ ಜೇಟ್ಲೀ ಬೆಂಬಲಿಸಿದರು. ಈ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಅನಂತಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News