ಎಷ್ಟು ಕರೆದರೂ ತನ್ನ ತಂದೆ ಯಾಕೆ ಗಲ್ಫ್ ಭೇಟಿಗೆ ಬರುತ್ತಿಲ್ಲ ಎಂದು ಆತನಿಗೆ ಕೊನೆಗೂ ತಿಳಿಯಿತು ...

Update: 2017-03-17 10:50 GMT

ತಿರುವನಂತಪುರಂ, ಮಾ.17: ಕೇರಳ ಮೂಲದ ದೇವಿಸ್ ದೇವಸ್ಸಿ ಚಿರಾಮೆಲ್ ಅವರು ಉದ್ಯೋಗದಲ್ಲಿರುವುದು ಬಹರೈನ್ ನ ಮನಾಮದಲ್ಲಿ. ಅವರು ಇತ್ತೀಚೆಗೆ ಮಾಡಿದ ಫೇಸ್ ಬುಕ್ ಪೋಸ್ಟ್ ಒಂದು ಅವರು ತಮ್ಮ ತಂದೆಯ ಮೇಲಿಟ್ಟಿರುವ ಅಪಾರ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಹೊರಹೊಮ್ಮಿದ್ದು ವೈರಲ್ ಆಗಿದೆ.

ಕಳೆದ ಹಲವು ವರ್ಷಗಳಿಂದ ಬಹರೈನ್ನಲ್ಲಿರುವ ದೇವಿಸ್ ಅವರು ತಮ್ಮ ತಂದೆಯನ್ನು ತಾವು ಉದ್ಯೋಗದಲ್ಲಿರುವ ಸ್ಥಳಕ್ಕೆ ಭೇಟಿ ನೀಡಲು ಹಲವಾರು ಬಾರಿ ಆಹ್ವಾನಿಸಿದ್ದರೂ ಅವರು ನಯವಾಗಿ ನಿರಾಕರಿಸಿದ್ದರು. ಅದಕ್ಕೆ ಕಾರಣವೇನೆಂದು ಅವರಿಗೆ ಇತ್ತೀಚೆಗಷ್ಟೇ ತಿಳಿದು ಬಂದಿತ್ತು.

ಯಾವತ್ತೂ ಗ್ರಾಮದಲ್ಲಿಯೇ ವಾಸಿಸಿದ್ದ ದೇವಿಸ್ ಅವರ ತಂದೆ ಚಪ್ಪಲಿ ಧರಿಸಿದವರೇ ಅಲ್ಲ. ಅಷ್ಟೇ ಅಲ್ಲ, ಅವರು ಯಾವಾಗಲೂ ಮುಂಡು ಧರಿಸಿಯೇ ಇರುತ್ತಾರೆ.. ತಮ್ಮ ಮಗ ತಮ್ಮನ್ನು ವಿದೇಶಕ್ಕೆ ಆಹ್ವಾನಿಸಿದಾಗ ಚಪ್ಪಲಿ ಹಾಗೂ ಪ್ಯಾಂಟ್ ಧರಿಸದ ಹಾಗೂ ಮುಂಡು ಧರಿಸಿದ ತನ್ನನ್ನು ನೋಡಿ ಆತನಿಗೆ ಆತನ ಸ್ನೇಹಿತರೆದುರು ಅವಮಾನವಾಗಬಹುದೆಂಬ ಭಯದಿಂದ ಅವರು ಮಗನ ಆಹ್ವಾನವನ್ನು ನಿರಾಕರಿಸುತ್ತಲೇ ಬಂದಿದ್ದರು.

ಆದರೆ ಇತ್ತೀಚೆಗೆ ಬಹರೈನ್ಗೆ ಬರುವಂತೆ ದೇವಿಸ್ ತಮ್ಮ ತಂದೆಯ ಮನವೊಲಿಸಿಯೇ ಬಿಟ್ಟರು. ಆದರೆ ಅವರ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ದೇವಿಸ್ ಕೂಡ ತಂದೆಯಂತೆಯೇ ಮುಂಡು ಧರಿಸಿದರು ಹಾಗೂ ಚಪ್ಪಲಿ ಧರಿಸುವುದನ್ನು ಬಿಟ್ಟು ಬಿಟ್ಟರು.

ತಮ್ಮ ತಂದೆ ಬಹರೈನ್ನಿಂದ ಹಿಂದಿರುಗುವ ವರೆಗೆ ತಾವು ಕೂಡ ಚಪ್ಪಲಿ ಅಥವಾ ಪ್ಯಾಂಟ್ ಧರಿಸುವುದಿಲ್ಲ, ಕೇವಲ ಮುಂಡು ಧರಿಸುತ್ತೇನೆ ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರಲ್ಲದೆ, ತಮ್ಮ ತಂದೆ ಹಾಗೂ ತಾಯಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ತಾವು ಕುಳಿತಿರುವ ಚಿತ್ರವೊಂದನ್ನು ಪೋಸ್ಟ್ ಕೂಡ ಮಾಡಿದ್ದಾರೆ.

‘‘ಚಪ್ಪಲಿ ಧರಿಸದಿರುವ ನನ್ನ ತಂದೆಯನ್ನು ನಾನು ಪ್ರೀತಿಸುತ್ತೇನೆ. ಅವರೇಕೆ ನನ್ನ ಆಹ್ವಾನ ನಿರಾಕರಿಸುತ್ತಿದ್ದರೆಂದು ನನಗೆ ಡಿಸೆಂಬರಿನಲ್ಲಷ್ಟೇ ತಿಳಿದು ಬಂದಿತ್ತು. ಅವರು ಕೇರಳದ ಒಂದು ಗ್ರಾಮದ ರೈತ. ನನ್ನ ತಾಯಿ ಬಹರೈನ್ಗೆ ಹಲವು ಬಾರಿ ಬಂದಿದ್ದರೂ ತಂದೆ ಬಂದಿಲ್ಲ. ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ಬರಿಗಾಲಲ್ಲಿ ನಡೆದ ಅವರ ಕಾಲಿನಿಂದ ಚಿಮ್ಮಿದ ರಕ್ತದಿಂದಾಗಿಯೇ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸುವಂತಾಗಿದೆ. ಹೆತ್ತವರು ತಮ್ಮ ಮಕ್ಕಳಿಗಾಗಿ ಅನುಭವಿಸುವ ಯಾತನೆ ನನಗೆ ಗೊತ್ತು. ನಮ್ಮ ಹೆತ್ತವರ ಸಮಾಧಿಗೆ ಹೂವುಗಳನ್ನಿಡುವ ಬದಲು ಅವರ ಜೀವಿತಾವಧಿಯಲ್ಲಿ ಅವರ ಕೈಗಳಲ್ಲಿ ಹೂವುಗಳನ್ನಿಡೋಣ’’ ದೇವಿಸ್ ಅವರ ಈ ಭಾವನಾತ್ಮಕ ಪೋಸ್ಟ್ ಹಲವರ ಕಣ್ಣಲ್ಲಿ ನೀರು ತರಿಸಿರಬಹುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News