×
Ad

ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಎದ್ದು ನಿಲ್ಲದ ಇಬ್ಬರ ಬಂಧನ

Update: 2017-03-17 18:06 IST

ಹೈದರಾಬಾದ್, ಮಾ.17: ಸಿನೆಮಾ ಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಎದ್ದುನಿಲ್ಲದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಕಚಿಗುಡ್ಡ ಪ್ರದೇಶದ ಸಿನೆಮಾ ಮಂದಿರವೊಂದರಲ್ಲಿ ಸಿನೆಮಾ ಪ್ರದರ್ಶನ ಆರಂಭವಾಗುವ ಮೊದಲು ರಾಷ್ಟ್ರಗೀತೆ ಪ್ರಸಾರ ಮಾಡಿದಾಗ ಸಿನೆಮಾ ಮಂದಿರದಲ್ಲಿದ್ದ ಇಬ್ಬರು ವ್ಯಕ್ತಿಗಳು ಎದ್ದುನಿಂತು ಗೌರವ ಸೂಚಿಸಿಲ್ಲ ಎಂದು ಪತ್ರಕರ್ತರೋರ್ವರು ಪೊಲೀಸರಿಗೆ ದೂರು ನೀಡಿದ್ದರು.

    ಅದರಂತೆ ಸಿನೆಮಾ ಮಂದಿರಕ್ಕೆ ಆಗಮಿಸಿದ ಪೊಲೀಸರು, ಸೈಯದ್ ಹುಸೈನಿ ಮತ್ತು ಮುಹಮ್ಮದ್ ಇಲ್ಯಾಸ್ ಎಂಬ ಇಬ್ಬರನ್ನು ಠಾಣೆಗೆ ಕರೆದೊಯ್ದರು. ಓರ್ವ ನಾಗರಿಕನ ನೆಲೆಯಲ್ಲಿ ತಾನು ದೂರು ನೀಡಿದ್ದು ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಪತ್ರಕರ್ತ ಸಂಪತ್ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

   ಯಾವ ಪ್ರಕರಣದಡಿ ತಮ್ಮ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಲು ಪೊಲೀಸರು ಒಪ್ಪಲಿಲ್ಲ. ಅಲ್ಲದೆ ಮನೆಯವರನ್ನು ಸಂಪರ್ಕಿಸಲೂ ಬಿಡದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಹುಸೈನಿ ಮತ್ತು ಇಲ್ಯಾಸ್ ತಿಳಿಸಿದ್ದಾರೆ. ರಾಷ್ಟ್ರೀಯ ಗೌರವಕ್ಕೆ ಅವಹೇಳನ ಮಾಡುವುದನ್ನು ತಡೆಯುವ ಕಾಯ್ದೆ (1971)ಯ 3ನೇ ಪರಿಚ್ಛೇದದಡಿ ಇವರ ವಿರುದ್ಧ ದೂರು ದಾಖಲಿಸಲಾಗಿದ್ದು ಈ ಕಾಯ್ದೆಯಡಿ ಅಪರಾಧಿಗಳಿಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ.

 30 ವರ್ಷದ ಹುಸೈನಿ ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದು ಮದುವೆಯ ಕಾರಣ ತಾತ್ಕಾಲಿಕವಾಗಿ ಭಾರತಕ್ಕೆ ಆಗಮಿಸಿದ್ದು ಕೆಲ ದಿನಗಳಲ್ಲೇ ವಾಪಾಸು ತೆರಳಬೇಕಿತ್ತು. ಸಿನೆಮಾ ಮಂದಿರದ ಮೆಟ್ಟಿಲು ಹತ್ತುವ ವೇಳೆ ನನ್ನ ಕಾಲು ಉಳುಕಿತ್ತು. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದಾಗ ನಾನು ಎದ್ದುನಿಲ್ಲಲು ಮುಂದಾಗಿದ್ದೆ. ಆದರೆ ಆಗ ನನ್ನ ಹಿಂದಿನ ಸಾಲಿನಲ್ಲಿದ್ದ ಕೆಲವರು ‘ಅರೆ.. ಅರೆ..’ ಎಂದು ಜೋರಾಗಿ ಕಿರುಚಿದರು. ಇದರಿಂದ ನನಗೂ ರೇಗಿಹೋಯಿತು. ಎದ್ದು ನಿಲ್ಲಲಿಲ್ಲ ಎಂದು ಹುಸೈನಿ ತಿಳಿಸಿದ್ದಾರೆ.

  ಪೊಲೀಸರು ವಕೀಲನಾಗಿರುವ ನನ್ನ ಸೋದರನಿಗೆ ಕರೆ ಮಾಡಿ , ನಾನು ಭಾರೀ ದೊಡ್ಡ ಅಪರಾಧ ಎಸಗಿರುವುದಾಗಿ ತಿಳಿಸಿದರು. ನಾನು ಯಾರನ್ನೋ ಕೊಲೆ ಮಾಡಿರುವ ರೀತಿಯಲ್ಲಿ ಪೊಲೀಸರು ಮಾತಾಡುತ್ತಿದ್ದರು ಎಂದವರು ಹೇಳಿದರು. ಅಂತಿಮವಾಗಿ 4 ಗಂಟೆ ಸ್ಟೇಷನ್‌ನಲ್ಲಿ ಕೂಡಿ ಹಾಕಿದ ಬಳಿಕ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಯಿತು. ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಎದ್ದು ನಿಲ್ಲದಿರುವುದು ಶಿಕ್ಷಾರ್ಹ ಅಪರಾಧ ಎಂದಾದರೆ, ರಾಷ್ಟ್ರಗೀತೆ ಪ್ರಸಾರದ ಸಂದರ್ಭ ಬೊಬ್ಬೆ ಹೊಡೆಯುವುದೂ ಅಪರಾಧವಲ್ಲವೇ ? ಆತನ ವಿರುದ್ಧ ನಾನೂ ದೂರು ದಾಖಲಿಸಬಹುದು ಎನ್ನುತ್ತಾರೆ ಹುಸೈನಿ . ಪೊಲೀಸ್ ಕೇಸು ದಾಖಲಾಗಿರುವುದರಿಂದ ಆಸ್ಟ್ರೇಲಿಯಾದ ಉದ್ಯೋಗಕ್ಕೆ ತೊಂದರೆಯಾಗಬಹುದು ಎಂಬ ಚಿಂತೆಯಲ್ಲಿದ್ದಾರೆ ಹುಸೈನಿ ಮನೆಯವರು.

    ಈ ಮಧ್ಯೆ ದೂರು ದಾಖಲಿಸಿರುವ ಪತ್ರಕರ್ತ ಸಂಪತ್ ಘಟನೆಯ ಬಗ್ಗೆ ವಿವರಿಸಿದ್ದಾರೆ. ಈ ಮೊದಲು ಮತ್ತೊಂದು ಸಿನೆಮಾ ಮಂದಿರದಲ್ಲೂ ಇದೇ ರೀತಿ ನಡೆದಿತ್ತು. ಮತ್ತೊಮ್ಮೆ ಪುನರಾವರ್ತನೆಯಾದಾಗ ನನಗೆ ಸಹಿಸಲಾಗಲಿಲ್ಲ. ಅಲ್ಲದೆ , ನಾನು ಒತ್ತಾಯಿಸಿದಾಗ ಇಲ್ಯಾಸ್ ಎದ್ದು ನಿಲ್ಲಲು ಮುಂದಾದರೂ ಹುಸೈನಿ ಆತನನ್ನು ಒತ್ತಾಯಪೂರ್ವಕವಾಗಿ ಕುಳ್ಳಿರಿಸಿ, ಮೊಬೈಲ್ ಫೋನ್‌ನಲ್ಲಿ ಮಾತಾಡುವುದನ್ನು ಮುಂದುವರಿಸಿದ್ದ. ಇದರಿಂದ ರೇಗಿಹೋಯ್ತು ಎಂದು ತಿಳಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News