ರಾಜ್ಯಸಭೆಯಲ್ಲಿ ಗೋವಾ ಗದ್ದಲ : ಕಾಂಗ್ರೆಸ್ ಸದಸ್ಯರಿಂದ ಚರ್ಚೆಗೆ ಪಟ್ಟು; ಕಲಾಪ ಮಂದೂಡಿಕೆ

Update: 2017-03-17 14:48 GMT

ಹೊಸದಿಲ್ಲಿ,ಮಾ.17: ಗೋವಾದಲ್ಲಿ ಸರಕಾರ ರಚನೆಯ ಅವಕಾಶದಿಂದ ವಂಚಿತವಾಗಿರುವ ಕಾಂಗ್ರೆಸ್ ಶುಕ್ರವಾರ ರಾಜ್ಯಸಭೆಯಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿತು. ಗೋವಾದಲ್ಲಿ ತಮ್ಮ ಪಕ್ಷವು ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವ ಹೊರತಾಗಿಯೂ, ಅಲ್ಲಿ ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡಿರುವ ಬಗ್ಗೆ ಸದನದಲ್ಲಿ ಚರ್ಚಿಸುವುದಕ್ಕಾಗಿ ಇತರ ಎಲ್ಲಾ ಕಲಾಪಗಳನ್ನು ಅಮಾನತಿನಲ್ಲಿಡಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದರು.

    ಕಾಂಗ್ರೆಸ್‌ನ ಬೇಡಿಕೆಯನ್ನು ತೀವ್ರವಾಗಿ ಬಿಜೆಪಿ ತೀವ್ರವಾಗಿ ವಿರೋಧಿಸಿದ ಬೆನ್ನಲ್ಲೇ ಉಭಯಪಕ್ಷಗಳ ಸದಸ್ಯರ ನಡುವೆ ಕಾವೇರಿದ ವಾಗ್ವಾದ ನಡೆದು, ಸ್ಪೀಕರ್ ಸದನವನ್ನು ಮುಂದೂಡಬೇಕಾದ ಸನ್ನಿವೇಶ ಉಂಟಾಯಿತು.

     ಇಂದು ಬೆಳಗ್ಗೆ ರಾಜ್ಯಸಭಾ ಕಲಾ ಆರಂಭಗೊಳ್ಳುತ್ತಿದ್ದಂತೆಯೇ, ಕಾಂಗ್ರೆಸ್ ಸದಸ್ಯರು ಗೋವಾ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿತು. ಆದರೆ ಉಪಸ್ಪೀಕರ್ ಕುರಿಯನ್ ಈ ಬಗ್ಗೆ ಸ್ವತಂತ್ರವಾದ ಗೊತ್ತುವಳಿಯನ್ನು ಮಂಡಿಸಿದರೆ ಮಾತ್ರವೇ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ‘‘ ಲೋಕತಂತ್ರಾ ಕಿ ತ್ಯಾ ಬಂದ್ ಕರೋ (ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ನಿಲ್ಲಿಸಿ)’’ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.

  ಉಪಸ್ಪೀಕರ್ ಕುರಿಯನ್ ಅವರ ನಿಲುವನ್ನು ಬಿಜೆಪಿ ಸದಸ್ಯರು ಕೂಡಾ ಸಮರ್ಥಿಸಿದರು. ಗೋವಾ ವಿಷಯವಾಗಿ ಸ್ವತಂತ್ರ ಗೊತ್ತುವಳಿಯಡಿ ಚರ್ಚೆಗೆ ಸರಕಾರ ಸಿದ್ಧವಿರುವುದಾಗಿ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ತಿಳಿಸಿದರು. ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿದರು.

  40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ನ  ಬದಲು ರಾಜ್ಯಪಾಲೆ ಮೃದುಲಾ ಸಿನ್ಹಾ ಬಿಜೆಪಿಯನ್ನು ಸರಕಾರ ರಚಿಸಲು ಆಹ್ವಾನಿಸಿರುವುದನ್ನು ಕಾಂಗ್ರೆಸ್ ಪ್ರಶ್ನಿಸಿತ್ತು. ಬಿಜೆಪಿ 13 ಸ್ಥಾನಗಳನ್ನು ಮಾತ್ರವೇ ಗೆದ್ದಿದ್ದರೂ, ಕೆಲವು ಸಣ್ಣ ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಸರಕಾರ ರಚನೆಗೆ ಹಕ್ಕು ಮಂಡಿಸಿತ್ತು.

ಗೋವಾದಲ್ಲಿ ಸರಕಾರ ರಚಿಸುವ ಸಾಮರ್ಥ್ಯವನ್ನು ಕಾಂಗ್ರೆಸ್ ಹೊಂದಿದೆಯೇ ಎಂಬ ಬಗ್ಗೆ ರಾಜ್ಯಪಾಲೆ ಮೃದುಲಾ ಸಿನ್ಹಾ ಪಕ್ಷದ ಜೊತೆ ಸಮಾಲೋಚನೆ ನಡೆಸಬೇಕಿತ್ತು ಎಂದು ಗೋವಾದಲ್ಲಿನ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯಪಾಲೆಯನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕರು ಕಾಲಾವಕಾಶ ಕೋರಿದರೂ, ಆಕೆ ಅದಕ್ಕೆ ಒಪ್ಪಲಿಲ್ಲವೆಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News