×
Ad

ಭಾರತದ ಇಬ್ಬರು ಧಾರ್ಮಿಕ ಮುಖಂಡರು ನಾಪತ್ತೆ

Update: 2017-03-17 23:12 IST

ಹೊಸದಿಲ್ಲಿ, ಮಾ.17: ಹೊಸದಿಲ್ಲಿಯ ಹಝ್ರತ್ ನಿಝಾಮುದ್ದೀನ್ ದರ್ಗಾದ ಪ್ರಮುಖ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಝಾಮಿ ಸೇರಿದಂತೆ ಇಬ್ಬರು ಭಾರತೀಯ ಧರ್ಮಗುರುಗಳು ಪಾಕಿಸ್ತಾನದಲ್ಲಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಪ್ರಕರಣದ ಬಗ್ಗೆ ತಕ್ಷಣ ಗಮನ ಹರಿಸುವಂತೆ ಪಾಕಿಸ್ತಾನ ಸರಕಾರವನ್ನು ಕೇಳಿಕೊಂಡಿರುವುದಾಗಿ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.

  80ರ ಹರೆಯದ ಸಯ್ಯದ್ ಆಸಿಫ್ ಅಲಿ ನಿಝಾಮಿ ಹಾಗೂ ಅವರ ಸೋದರಳಿಯ ನಝೀಮ್ ಅಲಿ ನಿಝಾಮಿ ಮಾರ್ಚ್ 8ರಂದು ಪಾಕಿಸ್ತಾನಕ್ಕೆ ಪ್ರವಾಸಿಗರಾಗಿ ತೆರಳಿದ್ದು, ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ನಾಪತ್ತೆಯಾಗಿದ್ದರು. ತನ್ನ ತಂದೆ ಮತ್ತು 60 ವರ್ಷದ ಸೋದರ ಸಂಬಂಧಿ ಲಾಹೋರ್‌ನಲ್ಲಿರುವ ಪ್ರಸಿದ್ಧ ದಾತ ದರ್ಬಾರ್ ಮಸೀದಿಗೆ ಯಾತ್ರೆಗೆಂದು ತೆರಳಿದ್ದು ಅಲ್ಲಿಂದ ಕರಾಚಿಗೆ ವಾಪಸ್ ಬರುವ ಸಂದರ್ಭ ನಾಪತ್ತೆಯಾಗಿದ್ದಾರೆ. ತಂದೆಯೊಂದಿಗೆ ಕೊನೆಯ ಬಾರಿ ಸಂಪರ್ಕಿಸಿದಾಗ ತಾನು ಕರಾಚಿ ವಿಮಾನ ನಿಲ್ದಾಣದಲ್ಲಿ ಇರುವುದಾಗಿ ತಿಳಿಸಿದ್ದರು ಎಂದು ನಿಝಾಮಿಯವರ ಪುತ್ರ ಸಾಝಿದ್ ಅಲಿ ನಿಝಾಮಿ ತಿಳಿಸಿದ್ದಾರೆ. ಮಾರ್ಚ್ 14ರಂದು ಲಾಹೋರ್‌ನಲ್ಲಿರುವ ದಾತ ದರ್ಬಾರ್ ಮಸೀದಿಯಲ್ಲಿ ‘ಚಾದರ್’ ಸಮರ್ಪಿಸಿದ್ದರು. ಮರುದಿನ ಕರಾಚಿಗೆ ತೆರಳಲೆಂದು ಸಂಜೆ 4:30ರ ವೇಳೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಲಾಹೋರ್ ವಿಮಾನನಿಲ್ದಾಣದಲ್ಲಿ ನಝೀಮ್ ಅಲಿ ನಿಝಾಮಿಯವರನ್ನು ನಿಲ್ದಾಣದ ಅಧಿಕಾರಿಗಳು ಕೆಲವು ದಾಖಲೆಪತ್ರ ಪರಿಶೀಲನೆಗಾಗಿ ತಡೆಹಿಡಿದಿದ್ದು ನನ್ನ ತಂದೆಯನ್ನು ವಿಮಾನ ಹತ್ತುವಂತೆ ತಿಳಿಸಿದ್ದಾರೆ.ಆ ಬಳಿಕ ಅವರಿಬ್ಬರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಅವರಿಬ್ಬರ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ನಮ್ಮ ಸ್ಥಿರ ದೂರವಾಣಿ(ಲ್ಯಾಂಡ್‌ಲೈನ್ ಫೋನ್ ನಂಬರ್) ಸಂಖ್ಯೆಯನ್ನು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದೇವೆ ಎಂದವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News