ರಾಜ್ಯಸಭೆಯಲ್ಲಿ ಚರ್ಚೆಗೆ ಬಂದ ಗೋಮೂತ್ರ, ಸೆಗಣಿ!

Update: 2017-03-18 03:55 GMT

ಹೊಸದಿಲ್ಲಿ, ಮಾ.18: ಸದಾ ಮಹತ್ವದ ವಿಚಾರಗಳ ಬಗ್ಗೆ ಗಹನವಾದ ಚರ್ಚೆ ನಡೆಸುವ ರಾಜ್ಯಸಭೆಯಲ್ಲಿ ಶುಕ್ರವಾರ ಗೋಮೂತ್ರ, ಸೆಗಣಿ, ಹಸುವಿನ ಬಗ್ಗೆ ಚರ್ಚೆ ನಡೆಯಿತು.

"ಆಮ್ಲಜನಕವನ್ನು ಉಸಿರಾಟದಲ್ಲಿ ಒಳಗೆಳೆದುಕೊಂಡು, ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಹಸು. ಹಸುವಿನ ಹಾಲಿನಲ್ಲಿ ಶೇಕಡ 47ರಷ್ಟು ಆಮ್ಲಜನಕ ಇದೆ. ಕಬ್ಬಿನ ಗದ್ದೆಯಲ್ಲಿ ಗೋಮೂತ್ರ ಬಳಸಿದರೆ, ಉದ್ದ, ದಪ್ಪ ಹಾಗೂ ಸಿಹಿ ಕಬ್ಬು ಸಿಗುತ್ತದೆ ಮಾತ್ರವಲ್ಲದೇ, ಇಳುವರಿಯೂ ಹೆಚ್ಚುತ್ತದೆ" ಎಂಬ ಬಿಜೆಪಿ ಸಂಸದ ಹೇಳಿದ್ದು ಚರ್ಚೆಗೆ ಕಾರಣವಾಯಿತು.

ದೇಶಿ ಹಸುವಿನ ತಳಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿಎಂಕೆಯ ಟಿ.ಶಿವ ಖಾಸಗಿ ಮಸೂದೆ ಮಂಡಿಸಿದ್ದು, ಈ ಚರ್ಚೆಗೆ ನಾಂದಿಯಾಯಿತು. ಆದರೆ ಬಳಿಕ ಮಸೂದೆಯನ್ನು ವಾಪಸ್ ಪಡೆಯಲಾಯಿತು. ಈ ಮಸೂದೆಗೆ ಬೆಂಬಲ ನೀಡಿದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್, "ಎಮ್ಮೆ ಹಾಗೂ ಎತ್ತುಗಳ ಬಗ್ಗೆ ತಾರತಮ್ಯ ಇರಬಾರದು" ಎಂದು ಪ್ರತಿಪಾದಿಸಿದರು. ಈ ಸಲಹೆಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳುತ್ತದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ತಿಳಿಸಿದರು.

ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆ-1960ಕ್ಕೆ ತಿದ್ದುಪಡಿ ತರುವಂತೆ ಶಿವ ಆಗ್ರಹಿಸಿದರು. ಡೀಸೆಲ್ ಟ್ರ್ಯಾಕ್ಟರ್‌ಗಳ ಬದಲು ಎತ್ತುಗಳನ್ನು ಉಳುಮೆಗೆ ಬಳಸುವಂತೆಯೂ ಸಲಹೆ ನೀಡಿದರು. ಮಸೂದೆ ಬಗ್ಗೆ ಮಾತನಾಡಿದ 10 ಸಂಸದರ ಪೈಕಿ 9 ಮಂದಿ ಅದನ್ನು ಬೆಂಬಲಿಸಿದರು. ಆದರೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು, "ಈ ಮಸೂದೆ ದೇಸಿ ಹಸು ರಕ್ಷಣೆಗಿಂತ ಹೆಚ್ಚಾಗಿ ಜಲ್ಲಿಕಟ್ಟು ಪರವಾಗಿದೆ" ಎಂದು ಅಭಿಪ್ರಾಯಪಟ್ಟು ವಿರೋಧಿಸಿದರು.

ಕರ್ನಾಟಕದ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್, ಹಸುವಿನ ಉಪಯುಕ್ತತೆ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಲ್ಲದೇ, ಸತ್ತ ಹಸುವನ್ನು ಹೂತರೆ ಮಣ್ಣಿನಲ್ಲಿ ಒಳ್ಳೆಯ ರಾಸಾಯನಿಕ ಕ್ರಿಯೆ ನಡೆಯುತ್ತದೆ. 8,000 ರೂಪಾಯಿ ಮೌಲ್ಯದ ರಸಗೊಬ್ಬರ ಹಾಕಿದಷ್ಟೇ ಫಲ ಸಿಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News