×
Ad

​ಮೋದಿ ಕನಸಿನ ಯೋಜನೆಗೆ ಟ್ರಂಪ್ ತಣ್ಣೀರು

Update: 2017-03-18 09:28 IST

ವಾಷಿಂಗ್ಟನ್, ಮಾ.18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊಟ್ಟಮೊದಲ ಬಜೆಟ್‌ನ ಚೌಕಟ್ಟನ್ನು ಘೋಷಿಸಿದ್ದು, ಹಲವು ಇಲಾಖೆಗಳಿಗೆ ನೀಡುತ್ತಿದ್ದ ಅನುದಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಹಾಕಿದ್ದಾರೆ. ಇದರಲ್ಲಿ ಅಮೆರಿಕದ ವ್ಯಾಪಾರ ಮತ್ತು ಅಭಿವೃದ್ಧಿ ಏಜೆನ್ಸಿ (ಯುಎಸ್‌ಟಿಡಿಎ) ಕೂಡಾ ಸೇರಿದೆ. ಈ ಇಲಾಖೆಯ ಅನುದಾನ ಕಡಿತಗೊಳ್ಳುವುದರಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ಮಾರ್ಟ್ ಸಿಟಿ ಯೋಜನೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಯೋಜನೆಗೆ ಯುಎಸ್‌ಟಿಡಿಎ ತಾಂತ್ರಿಕ ಪರಿಣತಿ ಹಾಗೂ ನೆರವನ್ನು ನೀಡುತ್ತಿದೆ.

ಇದರ ಜತೆಗೆ ಟ್ರಂಪ್, ಸಾಗರೋತ್ತರ ಖಾಸಗಿ ಹೂಡಿಕೆ ನಿಗಮ (ಒಪಿಐಸಿ) ಅನುದಾನಕ್ಕೂ ಕತ್ತರಿ ಹಾಕಿದ್ದಾರೆ. ಈ ಕೇಂದ್ರೀಯ ಸಂಸ್ಥೆ ಅಮೆರಿಕದ ಖಾಸಗಿ ವಲಯದಲ್ಲಿ ರಾಜಕೀಯ ಅಪಾಯ ಸಾಧ್ಯತೆ ವಿರುದ್ಧ ಸಾಲ, ಅನುದಾನ ಹಾಗೂ ವಿಮೆ ಸುರಕ್ಷೆಯನ್ನು ನೀಡುತ್ತದೆ. ಈ ಇಲಾಖೆಯು ಭಾರತದಲ್ಲಿ 40ಕ್ಕೂ ಹೆಚ್ಚು ಮೈಕ್ರೊ ಫೈನಾನ್ಸ್ ಹಾಗೂ ವಿದ್ಯುತ್ ಯೋಜನೆಗಳಿಗೆ ನೆರವು ನೀಡುತ್ತಿದೆ.

ಆದರೆ ಈ ಕಡಿತದಿಂದಾಗಿ ಭಾರತದ ಯೋಜನೆಗಳ ಮೇಲೆ ಎಷ್ಟು ತೀವ್ರ ಪ್ರಮಾಣದಲ್ಲಿ ಪರಿಣಾಮವಾಗುತ್ತದೆ ಎನ್ನುವುದನ್ನು ತಕ್ಷಣಕ್ಕೆ ಅಂದಾಜಿಸಲು ಸಾಧ್ಯವಾಗಿಲ್ಲ. ಟ್ರಂಪ್ ಅವರು 19 ಇಲಾಖೆಗಳ ಅನುದಾನವನ್ನು ಕಡಿತಗೊಳಿಸಿ, ರಕ್ಷಣಾ ವಿಭಾಗಕ್ಕೆ 54 ಶತಕೋಟಿ ಡಾಲರ್ ಅನುದಾನ ಹೆಚ್ಚಿಸಲು ನಿರ್ಧರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News