ಆಗ್ರಾ ಕಂಟೋನ್ಮೆಂಟ್ ರೈಲ್ವೆ ಸ್ಟೇಶನ್ ಬಳಿ ಕಡಿಮೆ ತೀವ್ರತೆಯ 2 ಬಾಂಬು ಸ್ಫೋಟ
ಲಕ್ನೊ, ಮಾ.18: ಆಗ್ರಾದ ಕಂಟೋನ್ಮೆಂಟ್ ರೈಲ್ವೆ ಸ್ಟೇಶನ್‌ನ ಸನಿಹ ಕಡಿಮೆ ತೀವ್ರತೆಯ ಎರಡು ಬಾಂಬುಗಳು ಸ್ಫೋಟಗೊಂಡಿದ್ದು, ಘಟನೆಯಿಂದ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಸ್ಪೋಟದಿಂದ ರೈಲ್ವೆ ಓಡಾಟಕ್ಕೆ ಧಕ್ಕೆಯಾಗಿಲ್ಲ.
ಭಯೋತ್ಪಾದಕ ದಾಳಿಯ ಬೆದರಿಕೆಯಿರುವ ಪತ್ರವನ್ನು ಪೊಲೀಸರು ವಶಪಡಿಸಿಕೊಂಡ ಕೆಲವೇ ಗಂಟೆಗಳ ಬಳಿಕ ಸ್ಫೋಟ ಸಂಭವಿಸಿದೆ. ಅಂಡಮಾನ್ ಎಕ್ಸ್‌ಪ್ರೆಸ್(ಚೆನ್ನೈಯಿಂದ ಜಮ್ಮು) ರೈಲು ಹಳಿ ಮೇಲೆ ದೊಡ್ಡ ಬಂಡೆಗಲ್ಲಿಗೆ ಢಿಕ್ಕಿ ಹೊಡೆಯುವುದರಿಂದ ತಪ್ಪಿಸಿಕೊಂಡ ಸ್ಥಳದಲ್ಲಿ ಪತ್ರವೊಂದು ಪತ್ತೆಯಾಗಿದೆ. ರೈಲ್ವೆ ಇಂಜಿನ್ ಚಾಲಕ ತುರ್ತು ಬ್ರೇಕ್ ಹಾಕಿದ ಕಾರಣ ಅಂಡಮಾನ್ ಎಕ್ಸ್‌ಪ್ರೆಸ್ ದೊಡ್ಡ ದುರಂತದಿಂದ ಪಾರಾಗಿತ್ತು.
ತ್ಯಾಜ್ಯ ಸಂಗ್ರಹಣೆಯ ಸ್ಥಳದಲ್ಲಿ ನಗರಪಾಲಿಕೆಯ ಕಾರ್ಮಿಕರು ತಮ್ಮ ಕೆಲಸದಲ್ಲಿ ತೊಡಗಿದ್ದಾಗಲೇ ಮೊದಲ ಸ್ಫೋಟ ಸಂಭವಿಸಿತ್ತು. ಮನೆಯ ಮಾಳಿಗೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡಗಳು ಹಾಗೂ ಶ್ವಾನದಳ ಘಟನಾ ಸ್ಥಳಕ್ಕೆ ಧಾವಿಸಿವೆ.
17ನೆ ಶತಮಾನದ ಭವ್ಯ ಸ್ಮಾರಕ ತಾಜ್ ಮಹಲ್‌ಗೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಶುಕ್ರವಾರ ವರದಿಯಾದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.