×
Ad

ನೈಜೀರಿಯ ಪ್ರಜೆಯ ಕವಿತೆ ಓದಿದ ಟ್ರಂಪ್: ಮೂಲ ಕವಿಗೆ ಅಚ್ಚರಿ!

Update: 2017-03-18 18:18 IST

ಅಬುಜ (ನೈಜೀರಿಯ), ಮಾ. 18: ಸೇಂಟ್ ಪ್ಯಾಟ್ರಿಕ್ಸ್ ದಿನದ ಭಾಗವಾಗಿ ಗುರುವಾರ ನಡೆದ ಆಚರಣೆಯೊಂದರಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಕವಿತೆಯೊಂದರ ಕೆಲವು ಸಾಲುಗಳನ್ನು ಓದಿದ್ದಾರೆ ಎಂದು ತಿಳಿದು ತನಗೆ ಆಶ್ಚರ್ಯವಾಗಿದೆ ಎಂದು ನೈಜೀರಿಯದ ವ್ಯಕ್ತಿಯೊಬ್ಬರು ‘ಸಿಎನ್‌ಎನ್’ ಸುದ್ದಿ ಚಾನೆಲ್‌ಗೆ ಹೇಳಿದ್ದಾರೆ.

‘‘ನನ್ನ ಸಹೋದರಿ ಈ ಸುದ್ದಿಯನ್ನು ನನಗೆ ತಿಳಿಸಿದಳು. ಅವಳು ಹೇಳಿದ್ದನ್ನು ಮೊದಲು ನಾನು ನಂಬಲಿಲ್ಲ’’ ಎಂದು ನೈಜೀರಿಯದ ಬ್ಯಾಂಕ್ ಉದ್ಯೋಗಿ ಅಲ್‌ಬಶೀರ್ ಆದಮ್ ಅಲ್‌ಹಸನ್ ಹೇಳಿದರು.

ಅವರು ಆ ಕವಿತೆಯನ್ನು ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದರು. ‘‘ಹತ್ತು ವರ್ಷಗಳ ಹಿಂದೆ ನಾನು ಕಾಲೇಜಿಗೆ ಹೋಗುತ್ತಿದ್ದಾಗ ಆ ಪದ್ಯವನ್ನು ಬರೆದು ಇಂಟರ್‌ನೆಟ್‌ಗೆ ಹಾಕಿದ್ದೆ. ಅದು ಈ ಮಟ್ಟಕ್ಕೆ ಹೋಗುತ್ತದೆ ಎಂದು ನಾನು ಯೋಚಿಸಿರಲಿಲ್ಲ’’ ಎಂದರು.

‘‘ಈಗ ಅನಿಸುತ್ತದೆ, ನಾನು ಬ್ಯಾಂಕ್ ಉದ್ಯೋಗಿಯಾಗಿರಬಾರದಿತ್ತು, ಜೀವನಪರ್ಯಂತ ಕವಿಯಾಗಿರಬೇಕಿತ್ತು’’ ಎಂದು ಅಲ್‌ಹಸನ್ ಹೇಳಿದರು.
ಕಟ್ಸಿನ ನಿವಾಸಿಯಾಗಿರುವ ಅವರು ಫಸ್ಟ್ ಬ್ಯಾಂಕ್ ಆಫ್ ನೈಜೀರಿಯದಲ್ಲಿ ಬಿಸ್ನೆಸ್ ಮ್ಯಾನೇಜರ್ ಆಗಿದ್ದಾರೆ.

ಸೇಂಟ್ ಪ್ಯಾಟ್ರಿಕ್ಸ್ ದಿನಾಚರಣೆ ಸಮಾರಂಭದ ಔತಣಕೂಟದಲ್ಲಿ ಐರ್‌ಲ್ಯಾಂಡ್ ಪ್ರಧಾನಿ ಎಂಡ ಕೆನ್ನಿ ಜೊತೆ ಭಾಗವಹಿಸಿದ ಟ್ರಂಪ್, ‘‘ನಮ್ಮ ಐರಿಶ್ ಸ್ನೇಹಿತರ ಜೊತೆಯಲ್ಲಿ ನಾನು ನಿಂತಿರುವಾಗ, ನನಗೆ ನುಡಿಗಟ್ಟೊಂದು ನೆನಪಾಗುತ್ತಿದೆ. ಇದು ಚೆನ್ನಾಗಿದೆ, ಇದು ನನ್ನ ಮನ ಗೆದ್ದಿದೆ. ನಾನು ಇದರ ಬಗ್ಗೆ ತುಂಬಾ ವರ್ಷಗಳಿಂದ ಕೇಳಿದ್ದೇನೆ, ನಾನಿದನ್ನು ಪ್ರೀತಿಸುತ್ತೇನೆ- ‘ಸ್ನೇಹ ನಿಜವಲ್ಲ ಎಂದು ಗೊತ್ತಾದರೆ ಸ್ನೇಹಿತರನ್ನು ಮರೆಯುವುದು ಯಾವತ್ತೂ ನೆನಪಿರಲಿ. ಆದರೆ, ನಿನ್ನ ಜೊತೆಗೆ ನಿಂತವರನ್ನು ನೆನಪಿನಲ್ಲಿಟ್ಟುಕೊಳ್ಳಲು ಯಾವತ್ತೂ ಮರೆಯಬೇಡ’.

‘‘ಇದು ನಮಗೆ ಗೊತ್ತಿದೆ. ನಮ್ಮಲ್ಲಿ ತುಂಬಾ ಮಂದಿಗೆ ಗೊತ್ತಿದೆ. ಇದು ಒಂದು ಅತ್ಯುತ್ತಮ ನುಡಿಗಟ್ಟು’’ ಎಂದುದ ಟ್ರಂಪ್ ಹೇಳಿದರು.

ಸೇಂಟ್ ಪ್ಯಾಟ್ರಿಕ್ ಕೂಡ ವಲಸಿಗ: ಟ್ರಂಪ್‌ಗೆ ಐರ್‌ಲ್ಯಾಂಡ್ ಪ್ರಧಾನಿ ಚಾಟಿ

ಸೇಂಟ್ ಪ್ಯಾಟ್ರಿಕ್ಸ್ ದಿನವನ್ನು ವಲಸಿಗನೊಬ್ಬನ ಗೌರವಾರ್ಥ ಆಚರಿಸಲಾಗುತ್ತಿದೆ ಎಂಬುದನ್ನು ಅಮೆರಿಕ ಪ್ರವಾಸದಲ್ಲಿರುವ ಐರ್‌ಲ್ಯಾಂಡ್ ಪ್ರಧಾನಿ ಎಂಡ ಕೆನ್ನಿ ಗುರುವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೆನಪಿಸಿದ್ದಾರೆ.

ವಾಶಿಂಗ್ಟನ್‌ನ ಶ್ವೇತಭವನದ ಪೂರ್ವದ ಕೋಣೆಯಲ್ಲಿ ಮಾತನಾಡಿದ ಕೆನ್ನಿ, ಟ್ರಂಪ್‌ರ ವಲಸೆ ನೀತಿಗಳಿಂದ ಉದ್ಭವಿಸಿದ ವಿವಾದಗಳನ್ನು ಗಮನದಲ್ಲಿರಿಸಿ ಈ ಮಾತನ್ನಾಡಿದರು.

‘‘ಸೇಂಟ್ ಪ್ಯಾಟ್ರಿಕ್ ಮತ್ತು ಅವರ ಪರಂಪರೆಯನ್ನು ಆಚರಿಸಲು ಪ್ರತಿ ವರ್ಷ ನಾವು ಇಲ್ಲಿ ಸೇರುವುದು ಒಳ್ಳೆಯ ಸಂಗತಿಯಾಗಿದೆ. ಅವರು ಕೂಡ ವಲಸಿಗರಾಗಿದ್ದರು.’’ ಎಂದು ಕೆನ್ನಿ ಹೇಳಿದರು.

ಸೇಂಟ್ ಪ್ಯಾಟ್ರಿಕ್ ಬ್ರಿಟನ್‌ನ ಯಾವುದೋ ಒಂದು ಊರಿನಲ್ಲಿ ಹುಟ್ಟಿರಬೇಕು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News