ಶ್ವೇತಭವನದಲ್ಲಿ ಟ್ರಂಪ್ ಸುರಕ್ಷಿತರಲ್ಲ ಮಾಜಿ ಸೀಕ್ರೆಟ್ ಸರ್ವಿಸ್ ಏಜಂಟ್ ಎಚ್ಚರಿಕೆ
ವಾಶಿಂಗ್ಟನ್, ಮಾ. 18: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸುರಕ್ಷಿತರಲ್ಲ, ಭಯೋತ್ಪಾದಕ ದಾಳಿ ನಡೆದರೆ ಅವರನ್ನು ರಕ್ಷಿಸಲು ಸೀಕ್ರೆಟ್ ಸರ್ವಿಸ್‌ಗೂ ಸಾಧ್ಯವಾಗುವುದಿಲ್ಲ ಎಂದು ಹಿಂದಿನ ಅಧ್ಯಕ್ಷರುಗಳ ಕಾವಲು ನಡೆಸುತ್ತಿದ್ದ ಮಾಜಿ ಸೀಕ್ರೆಟ್ ಸರ್ವಿಸ್ ಏಜಂಟ್ ಒಬ್ಬರು ಹೇಳಿದ್ದಾರೆ.
ಶ್ವೇತಭವನದ ಬೇಲಿ ಹಾರಿ, ಅತ್ಯಂತ ಸುರಕ್ಷಿತ ಆವರಣದಲ್ಲಿ 15 ನಿಮಿಷಗಳಿಗೂ ಹೆಚ್ಚು ಕಾಲ ಸುತ್ತಾಡಿದ ವ್ಯಕ್ತಿಯೊಬ್ಬನ ಬಂಧನದ ಒಂದು ವಾರದ ಬಳಿಕ, ಮಾಜಿ ಸೀಕ್ರೆಟ್ ಸರ್ವಿಸ್ ಏಜಂಟ್ ಡಾನ್ ಬೊಂಗಿನೊ ಈ ಹೇಳಿಕೆ ನೀಡಿದ್ದಾರೆ.
‘‘ಅತಿಕ್ರಮಣ ನಡೆದಾಗ ಹಲವಾರು ಎಚ್ಚರಿಕೆ ಕರೆಗಂಟೆಗಳು ಮೊಳಗಿದವು. ಯಾರೋ ಒಬ್ಬರು ಒಳನುಗ್ಗಿದ್ದಾರೆ ಎಂಬುದನ್ನು ಕರೆಗಂಟೆಗಳು ಸ್ಪಷ್ಟವಾಗಿ ಸೂಚಿಸಿವೆ. ಆದರೆ, ಇಂಥ ಯಾವುದೇ ಸಾಧ್ಯತೆಯನ್ನು ಊಹಿಸಿರದ ಅಧಿಕಾರಿಗಳಿಗೆ ಬಳಿಕ ಆತ ಕಂಡಿದ್ದಾನೆ’’ ಎಂದು ಬೊಂಗಿನೊ ಹೇಳಿದ್ದಾಗಿ ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.
ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬರಾಕ್ ಒಬಾಮ ಮತ್ತು ಜಾರ್ಜ್ ಡಬ್ಲು. ಬುಶ್ ಅವರಿಗೆ ಬೊಂಗಿನೊ ಕಾವಲು ನಿಂತಿದ್ದರು.
‘‘ಈ ಘಟನೆಯು ಶ್ವೇತಭವನದಲ್ಲಿ ಅಧ್ಯಕ್ಷರು ಸುರಕ್ಷಿತರಲ್ಲ ಎನ್ನುವುದನ್ನು ತೋರಿಸುತ್ತದೆ. ಅವರ ಸುರಕ್ಷತೆಯನ್ನು ಖಾತರಿಪಡಿಸಲು ಬೇಕಾದ ಉಪಕರಣಗಳು ಮತ್ತು ಸಿಬ್ಬಂದಿಯನ್ನು ಸೀಕ್ರೆಟ್ ಸರ್ವಿಸ್ ಹೊಂದಿಲ್ಲ’’ ಎಂದರು.
16 ನಿಮಿಷಗಳ ಕಾಲ ಶ್ವೇತಭವನ ಆವರಣದಲ್ಲಿದ್ದ ಆಗಂತುಕ!ಕಳೆದ ವಾರ ಶ್ವೇತಭವನದ ಬೇಲಿ ಹಾರಿ ಒಳನುಗ್ಗಿದ ವ್ಯಕ್ತಿ ಆವರಣದಲ್ಲಿ 16 ನಿಮಿಷಗಳ ಕಾಲ ಇದ್ದ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆರೋಪಿ 26 ವರ್ಷದ ಜೊನಾಥನ್ ಟ್ರಾನ್ ಅನುಮತಿಯಿಲ್ಲದೆ ಶ್ವೇತಭವನದ ಆವರಣ ಪ್ರವೇಶಿಸಿರುವುದಕ್ಕೆ ಗರಿಷ್ಠ 10 ವರ್ಷಗಳ ಶಿಕ್ಷೆಯ ಸಾಧ್ಯತೆಯನ್ನು ಎದುರಿಸುತ್ತಿದ್ದಾನೆ.
ಆತನು ಶ್ವೇತಭವನದ ಪಕ್ಕದ ಖಜಾನೆ ಇಲಾಖೆಯ ಸಮೀಪದಲ್ಲಿರುವ ಐದು ಅಡಿ ಎತ್ತರದ ಗೋಡೆಯನ್ನು ಹಾರಿದ, ಬಳಿಕ ಎಂಟು ಅಡಿ ಎತ್ತರದ ವಾಹನ ದ್ವಾರ ಹಾಗೂ ಶ್ವೇತಭವನದ ಈಸ್ಟ್ ವಿಂಗ್ ಮೈದಾನದ ಆಗ್ನೇಯ ಮೂಲೆಯ ಸಮೀಪದ ತಗ್ಗಿನ ಗೋಡೆಯನ್ನು ಹತ್ತಿದ. ಬಳಿಕ ಆತನನ್ನು ಸೆರೆಹಿಡಿಯಲಾಯಿತು ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ.
ಕ್ಯಾಲಿಫೋರ್ನಿಯ ರಾಜ್ಯದ ಮಿಲ್‌ಪಿಟಸ್ ನಿವಾಸಿಯಾಗಿರುವ ಟ್ರಾನ್ ಬೇಲಿ ಹಾರಿದ ಬಳಿಕ ಹಲವು ಎಚ್ಚರಿಕೆ ಕರೆಗಂಟೆಗಳು ಮೊಳಗಿದವು. ಆದರೆ, ಇತರ ಹಲವಾರು ಸೆನ್ಸರ್‌ಗಳನ್ನು ನಿವಾರಿಸಿಕೊಳ್ಳುವಲ್ಲಿ ಆತ ಯಶಸ್ವಿಯಾದ. ಶ್ವೇತಭವನದಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ಆತನನ್ನು ಪತ್ತೆಹಚ್ಚಲಾಯಿತು ಎಂದು ಸಿಎನ್‌ಎನ್ ಶುಕ್ರವಾರ ವರದಿ ಮಾಡಿದೆ.