×
Ad

10 ರೂ.ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಆರ್‌ಬಿಐಗೆ ಸರಕಾರದ ಹಸಿರು ನಿಶಾನೆ

Update: 2017-03-18 19:40 IST

ಹೊಸದಿಲ್ಲಿ,ಮಾ.18: ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ 10 ರೂ.ಗಳ ಪ್ಲಾಸ್ಟಿಕ್ ನೋಟುಗಳನ್ನು ಬಿಡುಗಡೆಗೊಳಿಸಲು ಆರ್‌ಬಿಐಗೆ ಕೇಂದ್ರ ಸರಕಾರವು ಒಪ್ಪಿಗೆಯನ್ನು ನೀಡಿದೆ ಎಂದು ಸಹಾಯಕ ವಿತ್ತ ಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು. ಪ್ಲಾಸ್ಟಿಕ್ ನೋಟುಗಳು ದೀರ್ಘಾವಧಿಯ ಬಾಳಿಕೆಯನ್ನು ಹೊಂದಿರುತ್ತವೆ.

  ಪ್ರಾಯೋಗಿಕ ಚಲಾವಣೆಯ ಬಳಿಕ ಪ್ಲಾಸ್ಟಿಕ್ ಕರೆನ್ಸಿ ನೋಟುಗಳನ್ನು ಬಿಡುಗಡೆಗೊಳಿಸಲು ಆರ್‌ಬಿಐ ಸುದೀರ್ಘ ಕಾಲದಿಂದ ಯೋಜಿಸುತ್ತಿದೆ. ದೇಶದ ಐದು ನಗರಗಳಲ್ಲಿ 10 ರೂ.ಗಳ ಒಂದು ಶತಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ಬಿಡುಗಡೆಗೊಳಿಸಲಾಗುವುದು ಎಂದು 2014, ಫೆಬ್ರುವರಿಯಲ್ಲಿ ಸರಕಾರವು ಸಂಸತ್ತಿನಲ್ಲಿ ತಿಳಿಸಿತ್ತು.

ಮೈಸೂರು, ಜೈಪುರ, ಕೊಚ್ಚಿ, ಶಿಮ್ಲಾ ಮತ್ತು ಭುವನೇಶ್ವರಗಳಲ್ಲಿ 10 ರೂ.ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಲಾಗುವುದು.

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನೋಟು ಮುದ್ರಣ ವೆಚ್ಚ ಹೆಚ್ಚುತ್ತಿದೆ. 2010-11,2011-12 ಮತ್ತು 2012-13ರಲ್ಲಿ ಈ ವೆಚ್ಚ ಅನುಕ್ರಮವಾಗಿ 2,376 ಕೋ.ರೂ.,2,736 ಕೋ.ರೂ. ಮತ್ತು 2,872 ಕೋ.ರೂ.ಆಗಿವೆ ಎಂದು ಆರ್‌ಬಿಐ ತಿಳಿಸಿದೆ.

ಪ್ಲಾಸಿಕ್ ನೋಟುಗಳನ್ನು ಸುಲಭದಲ್ಲಿ ನಕಲು ಮಾಡಲು ಸಾಧ್ಯವಿಲ್ಲ ಮತ್ತು ಅವು ಸರಾಸರಿ ಐದು ವರ್ಷಗಳ ಬಾಳಿಕೆಯನ್ನು ಹೊಂದಿರುತ್ತವೆ. ಅಲ್ಲದೆ ಕಾಗದದ ನೋಟುಗಳಿಗಿಂತ ಸ್ವಚ್ಛವಾಗಿರುತ್ತವೆ. ಪ್ಲಾಸ್ಟಿಕ್ ನೋಟುಗಳು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಚಲಾವಣೆಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News