ರೇಸರ್ ಅಶ್ವಿನ್ ಸುಂದರ್ ಮತ್ತು ಪತ್ನಿ ಕಾರು ಅಪಘಾತದಲ್ಲಿ ಸಜೀವ ದಹನ
ಚೆನ್ನೈ,ಮಾ.18: ಚೆನ್ನೈನಲ್ಲಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ರೇಸ್ ಕಾರುಗಳ ಚಾಲಕ ಅಶ್ವಿನ್ ಸುಂದರ್ ಮತ್ತು ಅವರ ಪತ್ನಿ ನಿವೇದಿತಾ ಅವರು ಸಜೀವ ದಹನಗೊಂಡಿದ್ದಾರೆ. ಅಶ್ವಿನ್ ಚಲಾಯಿಸುತ್ತಿದ್ದ ಬಿಎಂಡಬ್ಲೂ ಕಾರು ಮರಕ್ಕೆ ಡಿಕ್ಕಿ ಹೊಡೆದ ಬಳಿಕ ಅದಕ್ಕೆ ಬೆಂಕಿ ಹತ್ತಿಕೊಂಡಿತ್ತು.
ಅಪಘಾತದ ದೃಶ್ಯ ವೀಡಿಯೊ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಸುಕಿನ 3:30 ರ ಸುಮಾರಿಗೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡಿದ್ದು, ಕಾರಿನ ಬಾಗಲುಗಳನ್ನು ತೆರೆಯಲಾರದೆ ಒಳಗೆ ಸಿಕ್ಕಿ ಬಿದ್ದ ದಂಪತಿ ಸಜೀವ ದಹನಗೊಂಡಿದ್ದಾರೆ. ನಿವೇದಿತಾ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು.
27ರ ಹರೆಯದ ಅಶ್ವಿನ್ 2008ರಲ್ಲಿ ಜರ್ಮನಿಯ ರೇಸಿಂಗ್ ತಂಡ ಮಾ ಕಾನ್ ಮೋಟರ್ ಸ್ಪೋರ್ಟ್ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಜರ್ಮನ್ ಫಾರ್ಮ್ಯುಲಾ ಪೋಕ್ಸ್‌ವ್ಯಾಗನ್ ಎಡಿಎಸಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು.
ನಿಜವಾಗಿಯೂ ಬೈಕ್ ಚಾಲನೆಯನ್ನು ನಾನು ಹೆಚ್ಚು ಇಷ್ಟಪಡುತ್ತೇನೆ, ಅವು ವೇಗದ ನಿಜವಾದ ಅನುಭವನ್ನು ನೀಡುತ್ತವೆ, ಅದು ಹೆಚ್ಚು ಅಪಾಯಕಾರಿಯೆಂದು ಭಾಸವಾಗುತ್ತದೆ ಎಂದು ಅಶ್ವಿನ್ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.