×
Ad

​ಉಪಚುನಾವಣೆ ಬಹಿಷ್ಕಾರಕ್ಕೆ ಕರೆ : ಯಾಸೀನ್ ಮಲಿಕ್ ಬಂಧನ

Update: 2017-03-19 00:05 IST

ಶ್ರೀನಗರ, ಮಾ.18: ಶ್ರೀನಗರ ಹಾಗೂ ಅನಂತನಾಗ್ ಸಂಸದೀಯ ಕ್ಷೇತ್ರಗಳ ಉಪಚುನಾವಣೆಯನ್ನು ಬಹಿಷ್ಕರಿಸಲು ಪ್ರತ್ಯೇಕತಾವಾದಿಗಳು ಮತದಾರರಿಗೆ ಕರೆ ನೀಡಿದ ಒಂದು ದಿನದ ಬಳಿಕ ಜೆಕೆಎಲ್‌ಎಫ್ ವರಿಷ್ಠ ಮುಹಮ್ಮದ್ ಯಾಸೀನ್ ಮಲಿಕ್‌ರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
 ‘‘ಶ್ರೀನಗರದ ಹೃದಯಭಾಗವಾದ ಅಭಿಗುಝರ್ ಪ್ರದೇಶದಲ್ಲಿನ ಜಮ್ಮುಕಾಶ್ಮೀರ ವಿಮೋಚನಾ ರಂಗ (ಜೆಕೆಎಲ್‌ಎಫ್)ದ ಕಚೇರಿಗೆ ಆಗಮಿಸಿದ ಪೊಲೀಸರ ತಂಡವೊಂದು ಮಲಿಕ್‌ರನ್ನು ಬಂಧಿಸಿದೆ. ಉಪಚುನಾವಣೆಯನ್ನು ಬಹಿಷ್ಕರಿಸುವ ಅಭಿಯಾನದ ನೇತೃತ್ವವಹಿಸುವುದನ್ನು ತಡೆಯಲು ಅವರನ್ನು ಪೊಲೀಸರು ಬಂಧಿಸಿದ್ದಾರೆ’’ ಎಂದು ಜೆಕೆಎಲ್‌ಎಫ್ ವಕ್ತಾರರು ತಿಳಿಸಿದ್ದಾರೆ.
  ಜೆಕೆಎಲ್‌ಎಫ್ ಹಾಗೂ ಅದರ ಜೊತೆಗಾರ ಸಂಘಟನೆಯಾದ ಸೈಯದ್ ಶಾ ಗಿಲಾನಿ ನೇತೃತ್ವದ ತೀವ್ರವಾದಿ ಹುರಿಯತ್ ಕಾನ್ಫರೆನ್ಸ್ ಶುಕ್ರವಾರ ಶ್ರೀನಗರದಲ್ಲಿ ಪ್ರತಿಭಟನಾ ರ್ಯಾಲಿಯೊಂದನ್ನು ಆಯೋಜಿಸುವ ಮೂಲಕ ಚುನಾವಣಾ ಬಹಿಷ್ಕಾರ ಅಭಿಯಾನವನ್ನು ಜಂಟಿಯಾಗಿ ಆರಂಭಿಸಿದ್ದರು.
ಶ್ರೀನಗರ ಹಾಗೂ ಆನಂತನಾಗ್ ಸಂಸದೀಯ ಕ್ಷೇತ್ರಗಳ ಉಪಚುನಾವಣೆ ಎಣಿಕೆ ಕ್ರಮವಾಗಿ ಎಪ್ರಿಲ್ 9 ಹಾಗೂ ಎಪ್ರಿಲ್ 12ರಂದು ನಡೆಯಲಿದೆ.
 ‘‘ಮತದಾನ ಮಾಡುವುದಾಗಲಿ ಅಥವಾ ಮತದಾನ ಬಹಿಷ್ಕರಿಸುವುದಾಗಲಿ ಪ್ರತಿಯೊಬ್ಬ ವ್ಯಕ್ತಿಯ ಪ್ರಜಾತಾಂತ್ರಿಕ ಹಕ್ಕಾಗಿದೆ. ಆದರೆ ಚುನಾವಣೆ ಬಹಿಷ್ಕಾರಕ್ಕೆ ಪರವಾಗಿರುವವರನ್ನು ಭಯಭೀತಗೊಳಿಸುವುದು, ಅವರ ಕಚೇರಿ,ನಿವಾಸಗಳ ಮೇಲೆ ದಾಳಿ ನಡೆಸುವುದು ಹಾಗೂ ಬಂಧಿಸುವುದರಿಂದ, ಇಡೀ ಚುನಾವಣಾ ಪ್ರಕ್ರಿಯೆಯು ಒಂದು ಸೇನಾ ಕಾರ್ಯಾಚರಣೆಯಾಗಿ ಬಿಡುತ್ತದೆ’’ ಎಂದು ಮಲಿಕ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News