×
Ad

ವಿಐಪಿ ಸಂಸ್ಕೃತಿಗೆ ಕಡಿವಾಣ: 'ಕ್ಯಾಪ್ಟನ್' ಕಟ್ಟುನಿಟ್ಟಿನ ನಿರ್ಧಾರ

Update: 2017-03-19 09:05 IST

ಚಂಡೀಗಢ ಮಾ.19: ಸರ್ಕಾರಿ ವಾಹನಗಳಿಗೆ ಕೆಂಪುದೀಪ ನಿಷೇಧ, ಸಚಿವರಿಗೆ ಎರಡು ವರ್ಷಗಳ ಕಾಲ ವಿದೇಶ ಪ್ರವಾಸಕ್ಕೆ ತಡೆ, ಸರ್ಕಾರಿ ವೆಚ್ಚದಲ್ಲಿ ಅದ್ದೂರಿ ಪಾರ್ಟಿಗಳಿಗೆ ಗುಡ್‌ಬೈ ಹಾಗೂ ಪಂಜಾಬ್‌ನಲ್ಲಿ ವಿಐಪಿ ಸಂಸ್ಕೃತಿ ಕೊನೆ- ಪಂಜಾಬ್‌ನ ನೂತನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೈಗೊಂಡ ಕಟ್ಟುನಿಟ್ಟಿನ ನಿರ್ಧಾರಗಳು ಇವು.

ಪಂಜಾಬ್‌ನಲ್ಲಿ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ಪಂಜಾಬ್- ಹರ್ಯಾಣ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಾಹನಕ್ಕೆ ಮಾತ್ರ ಕೆಂಪುದೀಪ ಬಳಸಲು ಅವಕಾಶವಿದೆ ಎಂದು ಸರ್ಕಾರ ಪ್ರಕಟಿಸಿದೆ. ಶನಿವಾರ ನಡೆದ ಸಂಪುಟ ಸಭೆಯಲ್ಲಿ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಐತಿಹಾಸಿಕ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

ಎಲ್ಲ ಶಾಸಕರ ವೇತನ, ಭತ್ತೆ ಹಾಗೂ ಮರುಪಾವತಿಯ ಬಿಲ್ಲುಗಳನ್ನು ಪ್ರತಿ ತಿಂಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗುವುದು. ಪ್ರತಿ ವರ್ಷದ ಜನವರಿ 1ರಂದು ಎಲ್ಲ ಶಾಸಕರು ಹಾಗೂ ಸಂಸದರು ತಮ್ಮ ಸ್ಥಿರಾಸ್ತಿ ವಿವರಗಳನ್ನು ಬಹಿರಂಗಡಿಪಡಿಸಬೇಕು. 2017-18ನೇ ಸಾಲಿನ ಘೋಷಣೆಯನ್ನು ಜುಲೈ 1ರ ಒಳಗಾಗಿ ಮಾಡಬೇಕು ಎಂದೂ ನಿರ್ಧರಿಸಲಾಗಿದೆ.

ಸರ್ಕಾರಿ ವೆಚ್ಚದಲ್ಲಿ ಸಚಿವರು, ಶಾಸಕರು ಮತ್ತು ಇತರರು ವಿದೇಶ ಪ್ರವಾಸ ಕೈಗೊಳ್ಳಲು ಕೂಡಾ ಅವಕಾಶ ಇರುವುದಿಲ್ಲ. ಸರ್ಕಾರದ ಬೊಕ್ಕಸಕ್ಕೆ ಕಡಿಮೆ ಹೊರೆಯಾಗುವಂತೆ ಮಾಡುವ ಸಲುವಾಗಿ ಎಲ್ಲ ಶಾಸಕರು, ಸಚಿವರು, ಮಾಜಿ ಸಚಿವರು ಹಾಗೂ ಮುಖ್ಯಮಂತ್ರಿಯ ವೈದ್ಯಕೀಯ ವೆಚ್ಚಕ್ಕೆ ವಿಮಾಸುರಕ್ಷೆ ನೀಡಲು ಕೂಡಾ ಉದ್ದೇಶಿಸಲಾಗಿದೆ. ಅಂತೆಯೇ ಶಿಲಾನ್ಯಾಸಗಳಿಗೆ ನಿರ್ದಿಷ್ಟ ಶಿಷ್ಟಾಚಾರಗಳನ್ನು ಪಾಲಿಸಲು ಕೂಡಾ ಸೂಚಿಸಲಾಗಿದೆ. ಇದರ ಅನ್ವಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಭೆ ಸ್ಪೀಕರ್, ಕೇಂದ್ರ ಸಚಿವರು, ಸಿಎಂ, ರಾಜ್ಯ ಸಚಿವರು ಹಾಗೂ ರಾಜ್ಯ ಸ್ಪೀಕರ್ ಮಾತ್ರ ಶಿಲಾನ್ಯಾಸ ನೆರವೇರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News