100ನೆ ಟೆಸ್ಟ್ ಜಯಿಸಿದ ಬಾಂಗ್ಲಾದೇಶ,ಸರಣಿ ಸಮಬಲ

Update: 2017-03-19 17:56 GMT

ಕೊಲಂಬೊ, ಮಾ.19: ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಸಾಹಸದ ನೆರವಿನಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ ಐತಿಹಾಸಿಕ 100ನೆ ಟೆಸ್ಟ್ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಮೊತ್ತ ಮೊದಲ ಬಾರಿ ಜಯಿಸಿರುವ ಬಾಂಗ್ಲಾ ಈ ಗೆಲುವಿನ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ 259 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

ಎರಡನೆ ಟೆಸ್ಟ್ ಪಂದ್ಯದ ಗೆಲುವಿಗೆ 191 ರನ್ ಗುರಿ ಪಡೆದ ಬಾಂಗ್ಲಾದೇಶ 52.5 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು. 22ನೆ ಅರ್ಧಶತಕ ಬಾರಿಸಿದ ಇಕ್ಬಾಲ್(82) 2ನೆ ವಿಕೆಟ್‌ಗೆ ಶಬ್ಬೀರ್ರಹ್ಮಾನ್‌ರೊಂದಿಗೆ 109 ರನ್ ಸೇರಿಸಿ ತಂಡದ ರನ್ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ನಾಯಕ ಮುಶ್ಫಿಕುರ್ರಹೀಂ(ಅಜೇಯ 22) ಹಾಗೂ ಮೆಹದಿ ಹಸನ್(2) ತಂಡವನ್ನು ಗೆಲುವಿನ ದಡ ತಲುಪಿಸಿದರು. ಶ್ರೀಲಂಕಾದ ಸ್ಪಿನ್ನರ್‌ಗಳು ಕೊನೆಯ ಕ್ಷಣದಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ.

 ಒಂದು ಹಂತದಲ್ಲಿ 22 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಸೋಲಿನ ಭೀತಿಯಲ್ಲಿತ್ತು. ಆಗ 3ನೆ ವಿಕೆಟ್‌ಗೆ 109 ರನ್ ಜೊತೆಯಾಟ ನಡೆಸಿದ ತಮೀಮ್ ಇಕ್ಬಾಲ್(82 ರನ್, 125 ಎಸೆತ, 7 ಬೌಂಡರಿ,1 ಸಿಕ್ಸರ್) ಹಾಗೂ ಶಬ್ಬೀರ್ರಹ್ಮಾನ್(41, 76 ಎಸೆತ, 5 ಬೌಂಡರಿ)ತಂಡವನ್ನು ಆಧರಿಸಿದರು.

ಶಾಕಿಬ್ ಅಲ್ ಹಸನ್(15), ಹುಸೈನ್(13) ಬೇಗನೆ ಔಟಾದರು. ಅಜೇಯ 22 ರನ್ ಗಳಿಸಿದ ನಾಯಕ ಮುಶ್ಫಿಕುರ್ರಹೀಂ ಐತಿಹಾಸಿಕ ಪಂದ್ಯದಲ್ಲಿ ತಂಡಕ್ಕೆ 4 ವಿಕೆಟ್‌ಗಳ ಗೆಲುವು ತಂದರು.

ಶ್ರೀಲಂಕಾ-ಬಾಂಗ್ಲಾದೇಶ ಈ ತನಕ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ಪೈಕಿ ಶ್ರೀಲಂಕಾ 15 ಪಂದ್ಯಗಳನ್ನು ಜಯಿಸಿತ್ತು. 2 ಪಂದ್ಯಗಳಲ್ಲಿ ಡ್ರಾ ಸಾಧಿಸಿತ್ತು.

ಇದಕ್ಕೆ ಮೊದಲು 8 ವಿಕೆಟ್‌ಗಳ ನಷ್ಟಕ್ಕೆ 268 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡ 319 ರನ್‌ಗೆ ಆಲೌಟಾಯಿತು. 9ನೆ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದ ದಿಲ್‌ರುವಾನ್ ಪೆರೇರ(50) ಹಾಗೂ ಲಕ್ಮಲ್(42) ಬಾಂಗ್ಲಾದೇಶದ ಗೆಲುವಿಗೆ 191 ರನ್ ಗುರಿ ನೀಡಿದರು.

ಶಾಕಿಬ್ ಅಲ್ ಹಸನ್(4-74) ಹಾಗೂ ಮುಸ್ತಫಿಝುರ್ರಹ್ಮಾನ್(3-78) 7 ವಿಕೆಟ್‌ಗಳನ್ನು ಹಂಚಿಕೊಂಡರು.

 ಬಾಂಗ್ಲಾದೇಶದ ಗೆಲುವಿನ ರೂವಾರಿ ತಮೀಮ್ ಇಕ್ಬಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ಶಾಕಿಬ್ ಅಲ್ ಹಸನ್ ಸರಣಿಶ್ರೇಷ್ಠ  ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News