ಪೂಜಾರ ದ್ವಿಶತಕ, ಸಹಾ ಶತಕ: ರೋಚಕ ಘಟ್ಟದಲ್ಲಿ ಮೂರನೆ ಟೆಸ್ಟ್

Update: 2017-03-19 18:00 GMT

ರಾಂಚಿ, ಮಾ.19: ಚೇತೇಶ್ವರ ಪೂಜಾರ ದ್ವಿಶತಕ, ವೃದ್ಧಿಮಾನ್ ಸಹಾ ಶತಕ ಹಾಗೂ ರವೀಂದ್ರ ಜಡೇಜರ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೇಲುಗೈ ಸಾಧಿಸಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ.

6 ವಿಕೆಟ್‌ಗಳ ನಷ್ಟಕ್ಕೆ 360 ರನ್‌ನಿಂದ ನಾಲ್ಕನೆ ದಿನವಾದ ರವಿವಾರ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 210 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 603 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಪೂಜಾರ 202 ರನ್, ಸಹಾ 117 ರನ್ ಹಾಗೂ ಜಡೇಜ ಅಜೇಯ 54 ರನ್ ಕೊಡುಗೆ ನೀಡಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 152 ರನ್ ಮುನ್ನಡೆ ಪಡೆಯಲು ನೆರವಾದರು.

ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಜಡೇಜ(54 ರನ್, 55 ಎಸೆತ) ಆಸ್ಟ್ರೇಲಿಯದ 2 ವಿಕೆಟ್‌ಗಳನ್ನು ಕಬಳಿಸಿ 4ನೆ ದಿನದಾಟದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಲು ನೆರವಾದರು.

 ಎರಡನೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ ನಾಲ್ಕನೆ ದಿನದಾಟದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ. ಡೇವಿಡ್ ವಾರ್ನರ್(14) ಹಾಗೂ ನೈಟ್‌ವಾಚ್‌ಮನ್ ಲಿಯೊನ್(2) ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಗೆ ವಿಕೆಟ್ ಒಪ್ಪಿಸಿದ್ದಾರೆ. 

ಪೂಜಾರ-ಸಹಾ ಸಾಹಸ: ಪೂಜಾರ ಹಾಗೂ ಸಹಾ ಏಳನೆ ವಿಕೆಟ್‌ಗೆ 199 ರನ್ ಜೊತೆಯಾಟ ನಡೆಸಿ ಆಸ್ಟ್ರೇಲಿಯ ಬೌಲರ್‌ಗಳ ಬೆವರಿಳಿಸಿದರು.

ಸುದೀರ್ಘ ಬ್ಯಾಟಿಂಗ್ ಮಾಡಿದ ಪೂಜಾರ 3ನೆ ಬಾರಿ ದ್ವಿಶತಕ ಬಾರಿಸಿ ಗಮನ ಸೆಳೆದರು. 525 ಎಸೆತಗಳನ್ನು ಎದುರಿಸಿದ ಪೂಜಾರ 21 ಬೌಂಡರಿಗಳ ನೆರವಿನಿಂದ 202 ರನ್ ಗಳಿಸಿ ಸ್ಪಿನ್ನರ್ ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು. ಪೂಜಾರ ಎರಡನೆ ಬಾರಿ ಆಸೀಸ್‌ನ ವಿರುದ್ಧ ದ್ವಿಶತಕ ಬಾರಿಸಿದ್ದಾರೆ. 

ಟೆಸ್ಟ್ ಇನಿಂಗ್ಸ್‌ನಲ್ಲಿ 500ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ಪೂಜಾರ 2004ರಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ 270 ರನ್‌ಗಾಗಿ 495 ಎಸೆತಗಳನ್ನು ಎದುರಿಸಿದ್ದ ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದರು. ಆಸ್ಟ್ರೇಲಿಯ ವಿರುದ್ಧ 1000ಕ್ಕೂ ಅಧಿಕ ರನ್ ಗಳಿಸಿದ ಪೂಜಾರಗೆ ಉತ್ತಮ ಸಾಥ್ ನೀಡಿದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಹಾ 3ನೆ ಟೆಸ್ಟ್ ಶತಕ ಬಾರಿಸಿದರು. ಸಹಾ 233 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್‌ಗಳ ಸಹಿತ 117 ರನ್ ಗಳಿಸಿ ಓ’ಕೀಫೆಗೆ ಔಟಾದರು. 

ಬೆಳಗ್ಗಿನ ಸತತ 2 ಸೆಶನ್‌ಗಳಲ್ಲಿ ಆಸ್ಟ್ರೇಲಿಯ ಬೌಲರ್‌ಗಳಿಗೆ ವಿಕೆಟ್ ಮರೀಚಿಕೆಯಾಯಿತು. ಆಸೀಸ್ 1994ರ ಬಳಿಕ 200ಕ್ಕೂ ಓವರ್‌ಗಳ ಫೀಲ್ಡಿಂಗ್ ಮಾಡಿದೆ. ಐವರು ಬೌಲರ್‌ಗಳ ಪೈಕಿ ನಾಲ್ವರು 100ಕ್ಕೂ ಅಧಿಕ ರನ್ ಬಿಟ್ಟುಕೊಟ್ಟಿದ್ದಾರೆ. ಪ್ಯಾಟ್ ಕಮಿನ್ಸ್ ಮಾತ್ರ ಉತ್ತಮ ಪ್ರದರ್ಶನ ನೀಡಿದರು.

ಪೂಜಾರ ಹಾಗೂ ಸಹಾ ಟೀ ವಿರಾಮದ ಬಳಿಕ ವಿಕೆಟ್ ಒಪ್ಪಿಸಿದರು. ಆಗ ಕ್ರೀಸ್‌ಗೆ ಇಳಿದ ಜಡೇಜ ಕೇವಲ 55 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳನ್ನೊಳಗೊಂಡ ಅಜೇಯ 54 ರನ್ ಗಳಿಸಿ ರಾಂಚಿ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಲ್ಲದೆ ತಂಡದ ಮೊತ್ತವನ್ನು 600ರ ಗಡಿ ದಾಟಿಸಿದರು. ಆಸೀಸ್‌ನ ಪರ ಕಮಿನ್ಸ್(4-106) ಹಾಗೂ ಓ’ಕೀಫೆ(3-199) 7 ವಿಕೆಟ್‌ಗಳನ್ನು ಹಂಚಿಕೊಂಡರು.

ಅಂಕಿ-ಅಂಶ

525: ಚೇತೇಶ್ವರ ಪೂಜಾರ ತನ್ನ ಮ್ಯಾರಥಾನ್ ಬ್ಯಾಟಿಂಗ್‌ನಲ್ಲಿ 525 ಎಸೆತಗಳನ್ನು ಎದುರಿಸಿದರು. ಇದು ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಭಾರತದ ಬ್ಯಾಟ್ಸ್‌ಮನ್ ಎದುರಿಸಿದ ಗರಿಷ್ಠ ಎಸೆತವಾಗಿದೆ. ಈ ಹಿಂದೆ 2004ರಲ್ಲಿ ರಾಹುಲ್ ದ್ರಾವಿಡ್ ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್‌ನಲ್ಲಿ 495 ಎಸೆತಗಳನ್ನು ಎದುರಿಸಿ ಜೀವನಶ್ರೇಷ್ಠ 270 ರನ್ ಗಳಿಸಿದ್ದರು.

 04: ಪೂಜಾರ ಆಸ್ಟ್ರೇಲಿಯ ವಿರುದ್ಧ 500ಕ್ಕೂ ಅಧಿಕ ಎಸೆತಗಳನ್ನು ಎದುರಿಸಿದ ವಿಶ್ವದ ನಾಲ್ಕನೆ ದಾಂಡಿಗನಾಗಿದ್ದಾರೆ. ವ್ಯಾಲಿ ಹ್ಯಾಮಂಡ್ 3 ಬಾರಿ ಈ ಸಾಧನೆ ಮಾಡಿದ್ದರು.

02: ಪೂಜಾರ ಎರಡನೆ ಬಾರಿ ಆಸ್ಟ್ರೇಲಿಯದ ವಿರುದ್ಧ ದ್ವಿಶತಕ ಬಾರಿಸಿದ್ದಾರೆ. ಹ್ಯಾಮಂಡ್ 4 ದ್ವಿಶತಕ ಬಾರಿಸಿದ್ದರೆ, ಬ್ರಿಯಾನ್ ಲಾರಾ 3, ಗ್ರೆಮ್ ಪೊಲಾಕ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ತಲಾ 2 ದ್ವಿಶತಕ ಬಾರಿಸಿದ್ದಾರೆ. 210: ಭಾರತ 210 ಓವರ್‌ಗಳ ಬ್ಯಾಟಿಂಗ್ ನಡೆಸಿತು. ಭಾರತ ಕಳೆದ 55 ವರ್ಷಗಳಲ್ಲಿ 2ನೆ ಬಾರಿ ಸುದೀರ್ಘ ಟೆಸ್ಟ್ ಪಂದ್ಯ ಆಡಿದೆ. 199: ಪೂಜಾರ ಹಾಗೂ ಸಹಾ ಆಸ್ಟ್ರೇಲಿಯದ ವಿರುದ್ಧ 7ನೆ ವಿಕೆಟ್‌ನಲ್ಲಿ ಗರಿಷ್ಠ ಜೊತೆಯಾಟ(199) ನಡೆಸಿದ್ದಾರೆ. 1947-48ರಲ್ಲಿ ಹೇಮು ಅಧಿಕಾರಿ ಹಾಗೂ ವಿಜಯ್ ಹಝಾರೆ ಅಡಿಲೇಡ್‌ನಲ್ಲಿ 132 ರನ್ ಜೊತೆಯಾಟ ನಡೆಸಿದ್ದರು.

521: ಪೂಜಾರ ದ್ವಿಶತಕ ತಲುಪಲು 521 ಎಸೆತಗಳನ್ನು ಎದುರಿಸಿದರು. 1996-97ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲ್ಲಿ ನವಜೋತ್ ಸಿಂಗ್ ಸಿಧು 488 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. 03: ಸಹಾ ಮೂರನೆ ಟೆಸ್ಟ್ ಶತಕ ಪೂರೈಸಿದರು. ಎಂಎಸ್ ಧೋನಿ(6 ಶತಕ) ಬಳಿಕ ಗರಿಷ್ಠ ಶತಕ ಬಾರಿಸಿದ ಭಾರತದ 2ನೆ ವಿಕೆಟ್‌ಕೀಪರ್ ಸಹಾ. ಸಹಾ 34ನೆ ಇನಿಂಗ್ಸ್‌ನಲ್ಲಿ 3ನೆ ಶತಕ ಬಾರಿಸಿದರೆ, ಧೋನಿ 62ನೆ ಇನಿಂಗ್ಸ್‌ನಲ್ಲಿ ಮೂರನೆ ಶತಕ ಪೂರೈಸಿದ್ದರು.

ಸ್ಕೋರ್ ವಿವರ

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 451 ರನ್‌ಗೆ ಆಲೌಟ್

ಭಾರತ ಪ್ರಥಮ ಇನಿಂಗ್ಸ್: 210 ಓವರ್‌ಗಳಲ್ಲಿ 603/9 ಡಿಕ್ಲೇರ್

ರಾಹುಲ್ ಸಿ ವೇಡ್ ಬಿ ಕಮಿನ್ಸ್ 67

ಎಂ.ವಿಜಯ್ ಸ್ಟಂ.ವೇಡ್ ಬಿ ಒ’ಕೀಫೆ 82

ಚೇತೇಶ್ವರ ಪೂಜಾರ ಸಿ ಮ್ಯಾಕ್ಸ್‌ವೆಲ್ ಬಿ ಲಿಯೊನ್ 202

ವಿರಾಟ್ ಕೊಹ್ಲಿ ಸಿ ಸ್ಮಿತ್ ಬಿ ಕಮಿನ್ಸ್ 06

ರಹಾನೆ ಸಿ ವೇಡ್ ಬಿ ಕಮಿನ್ಸ್ 14

ಕರುಣ್ ನಾಯರ್ ಬಿ ಹೇಝಲ್‌ವುಡ್ 23

ಆರ್.ಅಶ್ವಿನ್ ಸಿ ವೇಡ್ ಬಿ ಕಮಿನ್ಸ್ 03

ವೃದ್ಧಿಮಾನ್ ಸಹಾ ಸಿ ಮ್ಯಾಕ್ಸ್‌ವೆಲ್ ಬಿ ಒ’ಕೀಫೆ 117

ರವೀಂದ್ರ ಜಡೇಜ ಅಜೇಯ 54

ಉಮೇಶ್ ಯಾದವ್ ಸಿ ವಾರ್ನರ್ ಬಿ ಓ’ಕೀಫೆ 16

ಇಶಾಂತ್ ಶರ್ಮ ಅಜೇಯ 00

ಇತರ 19

ವಿಕೆಟ್ ಪತನ: 1-91, 2-193, 3-225, 4-276, 5-320, 6-328, 7-527, 8-541, 9-595

ಬೌಲಿಂಗ್ ವಿವರ

ಹೇಝಲ್‌ವುಡ್ 44-10-103-1

ಕಮಿನ್ಸ್ 39-10-106-04

ಓ’ಕೀಫೆ 77-17-199-03

ಲಿಯೊನ್ 46-02-163-01

ಮ್ಯಾಕ್ಸ್‌ವೆಲ್ 04-00-13-00

ಆಸ್ಟ್ರೇಲಿಯ ಎರಡನೆ ಇನಿಂಗ್ಸ್: 7.2 ಓವರ್‌ಗಳಲ್ಲಿ 23/2

ವಾರ್ನರ್ ಬಿ ಜಡೇಜ 14

ರೆನ್‌ಶಾ ಅಜೇಯ 07

ಲಿಯೊನ್ ಬಿ ಜಡೇಜ 02

ವಿಕೆಟ್ ಪತನ: 1-17, 2-23

ಬೌಲಿಂಗ್ ವಿವರ

ಆರ್.ಅಶ್ವಿನ್ 4-0-17-0

ರವೀಂದ್ರ ಜಡೇಜ 3.2-1-6-2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News