ಘರ್ಷಣೆಗಿಳಿದ ಪ್ರತಿಭಟನಾಕಾರರು: ಡಿಎಸ್‌ಪಿ, ಮೂವರು ಪೊಲೀಸರಿಗೆ ಗಾಯ
ಫತೇಹಾಬಾದ್(ಹರ್ಯಾಣ),ಮಾ.19: ದಿಲ್ಲಿಯತ್ತ ಜಾಥಾದಲ್ಲಿ ತೆರಳುತ್ತಿದ್ದ ಜಾಟ್ ಪ್ರತಿಭಟನಾಕಾರರು ರವಿವಾರ ಇಲ್ಲಿ ಪೊಲೀಸರೊಂದಿಗೆ ಘರ್ಷಣೆಗಿಳಿದ ಪರಿಣಾಮ ಓರ್ವ ಡಿಎಸ್‌ಪಿ ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಆದರೆ,ಶಾಂತಿಯುತವಾಗಿ ಜಾಥಾದಲ್ಲಿ ಸಾಗುತ್ತಿದ್ದಾಗ ಪೊಲೀಸರು ಅಶ್ರುವಾಯು ಪ್ರಯೋಗಿಸಿ ತಮ್ಮನ್ನು ಚದುರಿಸಲು ಯತ್ನಿಸಿದ್ದರು ಮತ್ತು ಮೂವರು ಪ್ರತಿಭಟನಾಕಾರರೂ ಗಾಯಗೊಂಡಿದ್ದಾರೆ ಎಂದು ಜಾಟ್ ನಾಯಕರೋರ್ವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿಯ ಧನಿ ಗೋಪಾಲ ಗ್ರಾಮದಲ್ಲಿ ಜಾಟ್ ಪ್ರತಿಭಟನಾಕಾರರಿದ್ದ ಟ್ರಾಕ್ಟರ್‌ಗಳನ್ನು ದಿಲ್ಲಿಯತ್ತ ಹೋಗದಂತೆ ತಡೆಯಲು ಪೊಲೀಸರು ಪ್ರಯತ್ನಿಸಿದಾಗ ಅವರ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದಿವೆ. ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲುತೂರಾಟವನ್ನೂ ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಘರ್ಷಣೆಯಲ್ಲಿ ಡಿಎಸ್‌ಪಿ ದರ್ಜೆಯ ಅಧಿಕಾರಿ ಗುರುದಯಾಳ್ ಸಿಂಗ್ ಮತ್ತು ಮೂವರು ಕಾನ್‌ಸ್ಟೇಬಲ್‌ಗಳು ಗಾಯಗೊಂಡಿದ್ದಾರೆ ಎಂದರು.
ಪ್ರತಿಭಟನಾಕಾರರು ಎರಡು ಪೊಲೀಸ್ ಬಸ್‌ಗಳಿಗೆ ಹಾನಿಯನ್ನುಂಟು ಮಾಡಿದ್ದಲ್ಲದೆ, ಘಟನೆಯನು ಚಿತ್ರೀಕರಿಸುತ್ತಿದ್ದ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾಗಳನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಮೀಸಲಾತಿಗಾಗಿ ಆಗ್ರಹಿಸಿ ಜಾಟ್ ಸಮುದಾಯವು ಕಳೆದ 50 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಸಂಸತ್ತಿಗೆ ಮುತ್ತಿಗೆ ಹಾಕಿ ತನ್ನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲು ಉದ್ದೇಶಿಸಿದೆ.