ಮೂರನೆ ಟೆಸ್ಟ್‌ನಲ್ಲಿ ನಗೆಪಾಟಲಿಗೀಡಾದ ಅಂಪೈರ್!

Update: 2017-03-19 12:54 GMT

 ರಾಂಚಿ, ಮಾ.19: ಭಾರತ ಹಾಗೂ ಆಸ್ಟ್ರೇಲಿಯ ನಡುವೆ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್ ಡ್ರಾನತ್ತ ಮುಖ ಮಾಡಿದೆ. ಚೇತೇಶ್ವರ ಪೂಜಾರರ ಮ್ಯಾರಥಾನ್ ಬ್ಯಾಟಿಂಗ್ ಪ್ರೇಕ್ಷಕರಿಗೆ ಮಾತ್ರವಲ್ಲ ಅಂಪೈರ್‌ಗಳಿಗೂ ಬೋರ್ ಹೊಡೆಸಿದಂತೆ ಕಾಣುತ್ತಿದೆ. ಇದಕ್ಕೆ ತಾಜಾ ಉದಾಹರಣೆ ನಾಲ್ಕನೆ ದಿನದಾಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿವೀಸ್ ಅಂಪೈರ್ ಕ್ರಿಸ್ ಗಫೆನಿ.

ಭಾರತದ ಇನಿಂಗ್ಸ್‌ನ 140ನೆ ಓವರ್‌ನಲ್ಲಿ ಜೋಶ್ ಹೇಝಲ್‌ವುಡ್ ಎಸೆದ ಚೆಂಡನ್ನು ಚೇತೇಶ್ವರ ಪೂಜಾರ ಹೂಕ್ ಮಾಡಲು ಯತ್ನಿಸಿದರು. ಪೂಜಾರ ಬ್ಯಾಟ್‌ಗೆ ಸಿಗದ ಚೆಂಡು ವಿಕೆಟ್‌ಕೀಪರ್ ವೇಡ್ ಕೈ ಸೇರಿತು. ಆಗ ಸ್ಲಿಪ್‌ನಲ್ಲಿ ಫೀಲ್ಡಿಂಗ್‌ನಲ್ಲಿದ್ದ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅರ್ಧಮನಸ್ಸಿನಲ್ಲಿ ಔಟ್‌ಗಾಗಿ ಮನವಿ ಮಾಡಿದರು. ಇದನ್ನು ಗಮನಿಸಿದ ಗಫೆನಿ ಹಿಂದೆ-ಮುಂದೆ ನೋಡದೇ ಕೈಬೆರಳನ್ನು ಎತ್ತಿ ತಕ್ಷಣವೇ ತನ್ನ ಹ್ಯಾಟ್‌ನ್ನು ಮುಟ್ಟಿಕೊಂಡರು.

ಈ ದೃಶ್ಯ ನೋಡಿ ಎಲ್ಲರ ಮುಖದಲ್ಲೂ ನಗುಬಂತು. ಟಿವಿ ವೀಕ್ಷಕವಿವರಣೆಗಾರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಯಾಯಿತು.

ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಗಾರ ಆಕಾಶ್ ಚೋಪ್ರಾ ಅವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಹಾಕಿದ್ದಾರೆ.

ಗಫೆನಿ ನ್ಯೂಝಿಲೆಂಡ್‌ನ ಮಾಜಿ ಕ್ರಿಕೆಟಿಗನಾಗಿದ್ದು 83 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಐಸಿಸಿ ಎಲೈಟ್ ಅಂಪೈರ್ ಸಮಿತಿಯ ಸದಸ್ಯರಾಗಿದ್ದಾರೆ. ಎಲ್ಲ ಮೂರು ಮಾದರಿ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪೊಲೀಸ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

2010ರ ಸೆಪ್ಟಂಬರ್‌ನಲ್ಲಿ ಟೊರೊಂಟೊದಲ್ಲಿ ಕೆನಡಾ ಹಾಗೂ ಐರ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಅಂಪೈರ್ ಆಗಿದ್ದರು. 2014ರಲ್ಲಿ ಹರಾರೆಯಲ್ಲಿ ಝಿಂಬಾಬ್ವೆ ಹಾಗೂ ದ.ಆಫ್ರಿಕ ತಂಡಗಳ ನಡುವೆ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News