×
Ad

ಗ್ರಾಮೀಣ ವಸತಿ ಯೋಜನೆಯಲ್ಲಿ ಅವ್ಯವಹಾರ: ಶೀಘ್ರ ತನಿಖೆಗೆ ಸಂಸದೀಯ ಸಮಿತಿ ಸೂಚನೆ

Update: 2017-03-19 18:48 IST

ಹೊಸದಿಲ್ಲಿ, ಮಾ.19: ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತಕ್ಷಣ ಕೂಲಂಕುಷ ತನಿಖೆ ನಡೆಸುವಂತೆ ಸಂಸದೀಯ ಸಮಿತಿಯೊಂದು ಗೃಹನಿರ್ಮಾಣ ಮತ್ತು ಗ್ರಾಮೀಣ ಬಡತನ ಉಪಶಮನ (ಎಚ್‌ಯುಪಿಎ) ಸಚಿವಾಲಯಕ್ಕೆ ಸೂಚಿಸಿದೆ. ರಾಷ್ಟ್ರೀಯ ರಾಜಧಾನಿ ದಿಲ್ಲಿಯೂ ಸೇರಿದಂತೆ ಹಲವು ನಗರಗಳಲ್ಲಿ ‘ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ’ (ಗ್ರಾಮೀಣ ವಸತಿ ಯೋಜನೆ)ಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು , ಕೇವಲ 150 ರೂ. ಪಾವತಿಸಿ ಮನೆಯೊಂದನ್ನು ಕಾಯ್ದಿರಿಸಬಹುದು ಎಂದು ಕಾನೂನುಬಾಹಿರ ಶಕ್ತಿಗಳು ಮತ್ತು ಕಪಟ ಎನ್‌ಜಿಒ ಸಂಸ್ಥೆಗಳು ಸುಳ್ಳುಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಸಮಿತಿ ತೀವ್ರ ಕಳವಳ ಸೂಚಿಸಿದೆ.

 ‘2022ರ ವೇಳೆಗೆ ಸರ್ವರಿಗೂ ವಸತಿ’ ಅಭಿಯಾನದಡಿ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಕಡಿಮೆ ಆದಾಯ ಹೊಂದಿದವರಿಗೆ ವಸತಿಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಕೆಲವು ನಕಲಿ ಬಿಲ್ಡರ್‌ಗಳು, ಮನೆ ನಿರ್ಮಾಣ ಸಂಸ್ಥೆಗಳು ಇಂತಹ ವಸತಿಗಳನ್ನು ನೀಡುವುದಾಗಿ ಹಲವಾರು ಗ್ರಾಹಕರನ್ನು ನೋಂದಣಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಗ್ರಾಮೀಣ ಅಭಿವೃದ್ಧಿಯ ಸ್ಥಾಯಿ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.  ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯನ್ನು ಕೆಲ ಭ್ರಷ್ಟ ಸಮಾಜವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದ್ದು ಈ ಪ್ರಕರಣದ ಬಗ್ಗೆ ಗೃಹನಿರ್ಮಾಣ ಮತ್ತು ಗ್ರಾಮೀಣ ಬಡತನ ಉಪಶಮನ ಸಚಿವಾಲಯ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಬಿಜೂ ಜನತಾದಳದ ಪಿನಾಕಿ ಮಿಶ್ರಾ ಅಧ್ಯಕ್ಷತೆಯ ಸಮಿತಿ ತಿಳಿಸಿದೆ. ಈ ನಿಟ್ಟಿನಲ್ಲಿ ವಿಳಂಬವಾದರೆ ಮಿಲಿಯಾಂತರ ಜನರನ್ನು ಸುಲಿಗೆ ಮಾಡಲು ಅವರಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಸಮಿತಿ ತಿಳಿಸಿದೆ.

ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ನೀಡುವ ಮೂಲಕ ಇಂತಹ ಸಮಾಜಬಾಹಿರ ಶಕ್ತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಬಜೆಟ್‌ನಲ್ಲಿ

 ಗೃಹನಿರ್ಮಾಣ ಮತ್ತು ಗ್ರಾಮೀಣ ಬಡತನ ಉಪಶಮನ ಸಚಿವಾಲಯಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಬೇಕು ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News