×
Ad

ಮಹಿಳೆಯರಿಗಾಗಿಯೇ ಇರುವ ವೆಬ್‌ಸೈಟ್ ಕೇರಳದಲ್ಲಿ ಶೀಘ್ರ ಕಾರ್ಯಾರಂಭ

Update: 2017-03-19 20:20 IST

ತಿರುವನಂತಪುರಂ, ಮಾ.19: ಡಿಜಿಟಲ್ ಪ್ರಪಂಚದಲ್ಲಿ ಲಿಂಗ ಸಮಾನತೆ ಸಾಧಿಸುವ ಉದ್ದೇಶದಿಂದ ಮಹಿಳೆಯರನ್ನೇ ಒಳಗೊಂಡ ವೆಬ್‌ಸೈಟ್ ಕೇರಳದಲ್ಲಿ ಆರಂಭವಾಗಲಿದೆ.

ಮಹಿಳೆಯರ ಹೋರಾಟ ಮತ್ತು ಸಾಧನೆಯ ಬಗ್ಗೆ ಬೆಳಕು ಬೀರಲು ಉದ್ದೇಶಿಸಲಾಗಿದ್ದು ಪ್ರಮುಖವಾಗಿ ರಾಜ್ಯದ ಮಹಿಳೆಯರ ಕುರಿತಾದ ಸುದ್ದಿ, ಅಧ್ಯಯನ, ಸಂದರ್ಶನ, ಸಂವಾದ ಕಾರ್ಯಕ್ರಮ ಇತ್ಯಾದಿಗಳನ್ನು ಪ್ರಸಾರ ಮಾಡುವುದಾಗಿ - ಡಬ್ಲೂಡಬ್ಲೂಡಬ್ಲೂ.ವುಮೆನ್‌ಪಾಂಟ್.ಇನ್- ಎಂಬ ಮಹಿಳೆಯರೇ ಉಸ್ತುವಾರಿ ಹೊಂದಿರುವ ವೆಬ್‌ಸೈಟ್ ತಿಳಿಸಿದೆ.
 
 ಪುರುಷರೇ ಪ್ರಧಾನವಾಗಿರುವ ಡಿಜಿಟಲ್ ಪ್ರಪಂಚದಲ್ಲಿ ಮಹಿಳೆಯರಿಗೂ ಒಂದಿಷ್ಟು ಅವಕಾಶ ಸಿಗಲಿ ಎಂಬುದು ವೆಬ್‌ಸೈಟ್ ಆರಂಭದ ಹಿಂದಿರುವ ಕಾರಣವಾಗಿದೆ ಎಂದು ವೆಬ್‌ಸೈಟ್‌ನ ಸ್ಥಾಪಕರಲ್ಲಿ ಓರ್ವರಾಗಿರುವ ಸಾಮಾಜಿಕ ಕಾರ್ಯಕರ್ತೆ/ಪತ್ರಕರ್ತೆ ಆರ್.ಪಾರ್ವತಿ ದೇವಿ ತಿಳಿಸಿದ್ದಾರೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಪ್ರಪ್ರಥಮ ಸಮಗ್ರ ಡಿಜಿಟಲ್ ವೆಬ್‌ಸೈಟ್ ಇದಾಗಿದೆ ಎಂದವರು ತಿಳಿಸಿದ್ದಾರೆ. ನಮ್ಮ ಸಮಾಜದಲ್ಲಿರುವ ಮಹಿಳೆಯರ ಹೋರಾಟದ ಬದುಕು ಮತ್ತು ಸಾಧನೆಯನ್ನು ಸಾಕ್ಷಚಿತ್ರದ ಮೂಲಕ ಹೊರಜಗತ್ತಿಗೆ ಪ್ರಸ್ತುತಪಡಿಸುವುದು ನಮ್ಮ ಪ್ರಧಾನ ಉದ್ದೇಶವಾಗಿದೆ . ಸುದ್ದಿ, ಮಾಹಿತಿ, ಸಾಕ್ಷಚಿತ್ರ.. ಹೀಗೆ ಮಹಿಳೆಯರ ಕುರಿತಾದ ಯಾವುದೇ ವಿಷಯವಾದರೂ ಸರಿ, ನಮ್ಮ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ‘ಚರ್ಚೆ, ವಿಚಾರ ವಿನಿಮಯ, ಸ್ನೇಹ- ಮಹಿಳೆಯರಿಗೆ ಒಂದು ಅವಕಾಶ’ ಎಂಬುದು ವೆಬ್‌ಸೈಟ್‌ನ ಟ್ಯಾಗ್‌ಲೈನ್ ಆಗಿರುತ್ತದೆ. ಬರವಣಿಗೆಯ ಹವ್ಯಾಸ ಇರುವ ಯಾವುದೇ ಮಹಿಳೆ ವೆಬ್‌ಸೈಟ್‌ಗೆ ಬರಹಗಳನ್ನು ಕಳುಹಿಸಬಹುದು. ಅಲ್ಲದೆ ಈಗಾಗಲೇ ಇತರ ಮಾಧ್ಯಮಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದವರೂ, ಈ ವೆಬ್‌ಸೈಟ್‌ಗೆ ಕಳುಹಿಸಬಹುದು. ಆರಂಭದಲ್ಲಿ ಮಲಯಾಳಂ ಭಾಷೆಯಲ್ಲಿ ಪ್ರಕಟವಾದರೂ, ಮುಂದಿನ ದಿನಗಳಲ್ಲಿ ಇಂಗ್ಲಿಷ್ ಅಡಿಬರಹದೊಂದಿಗೆ ಪ್ರಕಟಿಸುವ ಇರಾದೆಯಿದೆ ಎಂದವರು ತಿಳಿಸಿದ್ದಾರೆ.

‘ಬುಕ್ ಮಾರ್ಕೆಟ್’ ವಿಭಾಗದಲ್ಲಿ ಮಹಿಳೆಯರು ಬರೆದಿರುವ ಪುಸ್ತಕಗಳನ್ನು ಪರಿಚಯಿಸಲಾಗುವುದು. ಮಹಿಳೆಯರು ಬರೆದಿರುವ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸುವ ಅಥವಾ ಮಾರಾಟಕ್ಕೆ ಅವಕಾಶ ನೀಡುವ ವೇದಿಕೆಯಾಗಿ ಬಳಸಿಕೊಳ್ಳುವ ಆಶಯವೂ ಇದೆ ಎಂದವರು ತಿಳಿಸಿದ್ದಾರೆ.

 ಸಾಹಿತಿ- ಅನುವಾದಕಿ ಸುನೀತಾ ಬಾಲಕೃಷ್ಣನ್, ಸರಕಾರದ ಅಧೀನದಲ್ಲಿರುವ ಮಲಯಾಳಂ ಕಾರ್ಯಕ್ರಮವೊಂದರ ನಿರ್ದೇಶಕಿ ಸುಜಾ ಸುಸಾನ್ ಜಾರ್ಜ್ ಈ ವೆಬ್‌ಸೈಟ್‌ನ ಇತರ ನಿರ್ದೇಶಕರು. ಮಾ.21ರಂದು ವೆಬ್‌ಸೈಟ್‌ಗೆ ಚಾಲನೆ ದೊರಕಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News