ಪವಾರ್‌ರನ್ನು ಭೇಟಿಯಾದ ರಾಹುಲ್

Update: 2017-03-20 08:24 GMT

ಹೊಸದಿಲ್ಲಿ,ಮಾ. 20: ಬಿಹಾರ ಮಾದರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಮಹಾಮೈತ್ರಿಯ ಕುರಿತು ಚರ್ಚೆಗಳು ಆರಂಭವಾಗಿದೆ. ಒಂದು ಕಡೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಮಹಾಮೈತ್ರಿಗೆ ಚಾಲನೆ ನೀಡುವ ಕುರಿತು ಚಿಂತನೆಗಳು ನಡೆಯುತ್ತಿವೆ. ಆದರೆ ಶರದ್‌ಪವಾರ್‌ರ ನಾಯಕತ್ವದಲ್ಲಿ ಮಹಾಮೈತ್ರಿ ರೂಪಿಸುವ ಸಾಧ್ಯತೆಯನ್ನು ಕಾಂಗ್ರೆಸ್ ಚಿಂತಿಸುತ್ತಿದೆ.

ಇದರ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶರದ್ ಪವಾರ್‌ರನ್ನು ಭೇಟಿಯಾಗಿದ್ದಾರೆ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶಪ್ರಕಟವಾದ ಬೆನ್ನಿಗೆ ಮಾರ್ಚ್ ಹತ್ತರಂದು ರಾಹುಲ್ ಶರದ್ ಪವಾರ್‌ರನ್ನು ಭೇಟಿಯಯಾಗಿದ್ದರು.

ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯನ್ನು ಭೇಟಿಮಾಡಲು ತೆರಳುವ ಮೊದಲು ರಾಹುಲ್ ಪವಾರ್‌ರನ್ನು ಭೇಟಿಯಾಗಿದ್ದಾರೆ.

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಹೊಣೆಯನ್ನು ವಹಿಸಿಕೊಳ್ಳಬೇಕೆಂದು ಪವಾರ್‌ರನ್ನು ರಾಹುಲ್ ವಿನಂತಿಸಿದ್ದಾರೆ.

  ಕಾಂಗ್ರೆಸ್‌ನಿಂದ ಹೊರಬಂದ ಬಳಿಕ ಪವಾರ್‌ರನ್ನು ಭೇಟಿಯಾಗಲು ನೆಹರೂ ಕುಟುಂಬದಿಂದ ಇದೇ ಮೊದಲಬಾರಿ ಓರ್ವರು ಬಂದಿದ್ದಾರೆ. ಪವಾರ್, ರಾಹುಲ್‌ರ ನಡುವೆ ಎರಡು ಗಂಟೆಗಳಕಾಲ ಸಮಾಲೋಚನೆ ನಡೆದಿತ್ತಾದರೂ ಎಲ್ಲಿ ನಡೆದಿದೆ ಎಂದು ಪಕ್ಷಗಳ ಮೂಲಗಳು ಬಹಿರಂಗ ಪಡಿಸಿಲ್ಲ.

ಪವಾರ್ ನಿತೀಶ್ ಕುಮಾರ್‌ಗಿಂತಲೂ ಹೆಚ್ಚು ಕಾರ್ಪೊರೇಟ್ ಜಗತ್ತಿನ ಸಂಬಂಧವನ್ನು ಹೊಂದಿದ ರಾಜಕಾರಣಿಯಾಗಿದ್ದಾರೆ. ಆದ್ದರಿಂದ ಕಾರ್ಪೊರೇಟ್ ಜಗತ್ತಿನ ಬೆಂಬಲಗಳಿಸಲು ಪವಾರ್ ಸಮರ್ಥರು. ನಿಧಿ ಸಂಗ್ರಹಿಸಲು ಪವಾರಿಂದ ಸಾಧ್ಯ ಎಂದು ಪ್ರತಿಪಕ್ಷಗಳಲ್ಲಿ ನಿರೀಕ್ಷೆಯಿದೆ.

ಮುಂದಿನ ವರ್ಷ ಎಪ್ರಿಲ್‌ನಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ವೇಳೆಗಾಗುವಾಗ ಮಹಾಮೈತ್ರಿ ರೂಪುಗೊಳ್ಳಬೇಕೆಂದು ಕಾಂಗ್ರೆಸ್‌ನ ಬಯಕೆ ಎನ್ನಲಾಗುತ್ತಿದೆ. ಆದರೆ ಪ್ರತಿಪಕ್ಷಗಳಲ್ಲಿ ಅತಿಹೆಚ್ಚು ಬೆಂಬಲ ನಿತೀಶ್‌ರಿಗಿದೆ. ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್, ಡಿಎಂಕೆ, ಟಿಆರ್‌ಎಸ್‌ನೊಂದಿಗೆ ನಿತೀಶ್ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಆದರೆ ಸಮಾಜವಾದಿ ಮತ್ತು ಬಹುಜನಸಮಜವಾದಿ ಪಕ್ಷಗಳಿಗೆ ನಿತೀಶ್ ಅಷ್ಟು ಸಮ್ಮತಾರ್ಹರಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News