ಮರ್ಕೆಲ್ ಕೈಕುಲುಕಲು ಟ್ರಂಪ್ ನಿರಾಕರಿಸಿಲ್ಲ

Update: 2017-03-20 14:45 GMT

ವಾಶಿಂಗ್ಟನ್, ಮಾ. 20: ಕಳೆದ ವಾರ ಶ್ವೇತಭವನದಲ್ಲಿ ಭೇಟಿಯಾಗಿದ್ದ ವೇಳೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್‌ರ ಕೈಕುಲುಕಲು ನಿರಾಕರಿಸಿದ್ದರು ಎಂಬ ವರದಿಗಳನ್ನು ಟ್ರಂಪ್ ವಕ್ತಾರ ನಿರಾಕರಿಸಿದ್ದಾರೆ.

‘‘ತಾವು ಕೈಕುಲುಕುವ ಎಂಬುದಾಗಿ ಮರ್ಕೆಲ್ ಹೇಳಿದ್ದು ಟ್ರಂಪ್‌ಗೆ ಕೇಳಿದೆ ಎಂದು ನನಗನಿಸುವುದಿಲ್ಲ’’ ಎಂದು ವಕ್ತಾರ ಸಿಯಾನ್ ಸ್ಪೈಸರ್ ಜರ್ಮನ್ ವಾರಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಅವರ ಹೇಳಿಕೆ ರವಿವಾರ ಪ್ರಕಟಗೊಂಡಿದೆ.

ಶುಕ್ರವಾರ ಮರ್ಕೆಲ್‌ರ ಭೇಟಿ ಸೌಹಾರ್ದಯುತವಾಗಿಯೇ ಆರಂಭಗೊಂಡಿತ್ತು. ಶ್ವೇತಭವನದ ದ್ವಾರದಲ್ಲಿ ಉಭಯ ನಾಯಕರು ಕೈಕುಲುಕಿದರು. ಆದರೆ, ಬಳಿಕ ಓವಲ್ ಕಚೇರಿಯಲ್ಲಿ ಅಕ್ಕ ಪಕ್ಕ ಕುಳಿತಾಗ, ತಾವು ಇನ್ನೊಮ್ಮೆ ಕೈಕುಲುಕುವ ಎಂಬ ಕೋರಿಕೆಯನ್ನು ಮರ್ಕೆಲ್ ವ್ಯಕ್ತಪಡಿಸಿದರು. ಆದರೆ, ಇದು ಟ್ರಂಪ್‌ಗೆ ಕೇಳಿಲ್ಲ ಅಥವಾ ಅದನ್ನು ಉಪೇಕ್ಷಿಸಿದರು.

ಇದು ಜರ್ಮನ್ ಚಾನ್ಸಲರ್ ಮತ್ತು ಅಮೆರಿಕದ ಅಧ್ಯಕ್ಷರ ನಡುವೆ ನಡೆದ ಹಾರ್ದಿಕವಲ್ಲದ ಮಾತುಕತೆಯ ಇನ್ನೊಂದು ಸೂಚನೆಯಾಗಿದೆ ಎಂಬುದಾಗಿ ಜರ್ಮನ್ ಪತ್ರಿಕೆಗಳು ವರದಿ ಮಾಡಿವೆ.

ನ್ಯಾಟೊಗೆ ಬಾಕಿ ಇಟ್ಟಿಲ್ಲ: ಬರ್ಲಿನ್

ಜರ್ಮನಿಯು ನ್ಯಾಟೊ ಮತ್ತು ಅಮೆರಿಕಕ್ಕೆ ರಕ್ಷಣೆಯ ಬಾಬ್ತು ಭಾರೀ ಮೊತ್ತವನ್ನು ಬಾಕಿಯಿಟ್ಟಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆಯನ್ನು ಜರ್ಮನಿ ರಕ್ಷಣಾ ಸಚಿವೆ ಉರ್ಸುಲಾ ವೊನ್ ಡೆರ್ ಲೆಯನ್ ರವಿವಾರ ತಳ್ಳಿಹಾಕಿದ್ದಾರೆ.

‘‘ನ್ಯಾಟೊದಲ್ಲಿ ಸಾಲ ಖಾತೆ ಇಲ್ಲ’’ ಅವರು ಹೇಳಿಕೆಯೊಂದರಲ್ಲಿ ತಿಳಿಸಿದರು.

 ನ್ಯಾಟೊ ಸದಸ್ಯ ರಾಷ್ಟ್ರಗಳು 2024ರ ವೇಳೆಗೆ ತಮ್ಮ ಆರ್ಥಿಕ ಉತ್ಪನ್ನದ 2 ಶೇಕಡವನ್ನು ರಕ್ಷಣೆಗಾಗಿ ಖರ್ಚು ಮಾಡಬೇಕು ಎಂಬುದಾಗಿ ನ್ಯಾಟೊ ನಿಗದಿಪಡಿಸಿದ ಗುರಿಯನ್ನು ನ್ಯಾಟೊದೊಂದಿಗೆ ಮಾತ್ರ ಸಮೀಕರಿಸಬಾರದು ಎಂದರು.

‘‘ರಕ್ಷಣಾ ವೆಚ್ಚವು ವಿಶ್ವಸಂಸ್ಥೆಯ ಶಾಂತಿಪಾಲನಾ ಯೋಜನೆಗಳಿಗೂ ಹೋಗುತ್ತದೆ, ನಮ್ಮ ಯುರೋಪಿಯನ್ ಯೋಜನೆಗಳಿಗೂ ಅನ್ವಯಿಸುತ್ತದೆ ಹಾಗೂ ಐಸಿಸ್ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೂ ಬಳಕೆಯಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News