×
Ad

ಬಿಎಸ್ಪಿ ಸ್ಥಳೀಯ ಮುಖಂಡನ ಗುಂಡಿಕ್ಕಿ ಹತ್ಯೆ

Update: 2017-03-20 23:59 IST

ಅಲಹಾಬಾದ್, ಮಾ.20: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಓರ್ವ ಬಿಎಸ್ಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು ಘಟನೆಯ ಬಳಿಕ ಪ್ರದೇಶದಲ್ಲಿ ಉದ್ರಿಕ್ತ ಸ್ಥಿತಿ ನೆಲೆಸಿದೆ. ಮೊಯಿಮ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ 60ರ ಹರೆಯದ ಮುಹಮ್ಮದ್ ಶಮಿ ಎಂಬವರನ್ನು ನಿವಾಸದ ಸಮೀಪವೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಬೆಂಬಲಿಗರಾಗಿ ಸ್ಥಳೀಯ ಪಂಚಾಯತ್‌ನಲ್ಲಿ ಐದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶಮಿ, ಕಳೆದ ವರ್ಷ ಪಂಚಾಯತ್ ಚುನಾವಣೆಯಲ್ಲಿ ಸೋತ ಬಳಿಕ ಬಿಎಸ್ಪಿ ಸೇರಿದ್ದರು. ಕೊಲೆ, ದರೋಡೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಶಮಿ ಶಾಮೀಲಾಗಿರುವುದಾಗಿ ಹೇಳಲಾಗಿದೆ. ಅಲ್ಲದೆ ಸ್ಥಳೀಯ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕರೊಂದಿಗೆ ವೈಮನಸ್ಯ ಹೊಂದಿದ್ದರು ಎಂದು ವರದಿಯಾಗಿದೆ. ಶಮಿ ಹತ್ಯೆಗೈದವರನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಶಮಿಯ ಬೆಂಬಲಿಗರು ಅಲಹಾಬಾದ್-ಪ್ರತಾಪ್‌ಗಡ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News