×
Ad

ಪತ್ರಕರ್ತ ರಾಜ್‌ದೀಪ್‌ಗೆ ಮುಖೇಶ್ ಅಂಬಾನಿಯಿಂದ ಒರಟು ಉತ್ತರ

Update: 2017-03-21 00:22 IST

ಹೊಸದಿಲ್ಲಿ, ಮಾ.20: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಸಂದರ್ಶನವೊಂದರ ಸಂದರ್ಭ ಹಿರಿಯ ಪತ್ರಕರ್ತ ಇಂಡಿಯಾ ಟುಡೆ ಚಾನೆಲ್ಲಿನ ರಾಜ್‌ದೀಪ್ ಸರ್ದೇಸಾಯಿಯವರಿಗೆ ಒರಟು ಉತ್ತರ ನೀಡಿದ ಘಟನೆಯೊಂದು ನಡೆದಿದೆ. ತಾನು ರಾಜ್‌ದೀಪ್ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳುವ ಮೂಲಕ ಮುಖೇಶ್ ಹಿರಿಯ ಪತ್ರಕರ್ತನ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

ಮುಖೇಶ್ ಅವರ ಸಂದರ್ಶನ ಕಾರ್ಯಕ್ರಮದ ಆರಂಭದಲ್ಲಿ ರಾಜ್‌ದೀಪ್ ಅವರು ರಿಲಯನ್ಸ್ ಸಮೂಹದ ಅಧ್ಯಕ್ಷರನ್ನು ವಿಭಿನ್ನ ರೀತಿಯಲ್ಲಿ ಪರಿಚಯಿಸಿದರು. ‘‘ನಮಸ್ಕಾರ, ಇಂದು ನಮ್ಮಾಂದಿಗೆ ನಮ್ಮ ದೇಶದ ಅತ್ಯಂತ ಪವರ್ ಫುಲ್ ವ್ಯಕ್ತಿ ಇದ್ದಾರೆ. ಇಲ್ಲ, ನರೇಂದ್ರ ಮೋದಿ ಅಲ್ಲ, ನಮ್ಮ ಜೊತೆಗಿದ್ದಾರೆ ಮುಖೇಶ್ ಅಂಬಾನಿ. ನಾನು ಅತ್ಯಂತ ಪವರ್ ಫುಲ್ ಅಥವಾ ಶಕ್ತಿಶಾಲಿ ವ್ಯಕ್ತಿಯೆಂದಾಗ ನೀವು ಅದನ್ನು ಯಾವ ದೃಷ್ಟಿಯಲ್ಲಿ ನೋಡುತ್ತೀರಿ ಹಾಗೂ ಅದನ್ನು ಒಪ್ಪುತ್ತೀರೇನು?’’ ಎಂಬ ರಾಜ್‌ದೀಪ್ ಪ್ರಶ್ನೆಗೆ ಉತ್ತರಿಸಿದ ಮುಖೇಶ್ ‘‘ನಾನು ಹಾಗೆಂದುಕೊಳ್ಳುವುದಿಲ್ಲ ಹಾಗೂ ನಾನು ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ’’ ಎಂದು ಉತ್ತರಿಸಿದರು. ಇದರಿಂದ ರಾಜ್‌ದೀಪ್ ಸ್ವಲ್ಪವಿಚಲಿತರಾದಂತೆ ಕಂಡು ಬಂದರೂ ಕೂಡಲೇ ಸಾವರಿಸಿಕೊಂಡು ಮಾತನ್ನು ಬೇರೆ ಕಡೆ ತಿರುಗಿಸಿಬಿಟ್ಟರು.

ಕೆಲ ದಿನಗಳ ಹಿಂದೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ವಿಶ್ಲೇಷಣೆಯ ಸಂದರ್ಭ ಒಬ್ಬ ವ್ಯಕ್ತಿ ಅವರಿಗೆ ಟ್ವೀಟ್ ಮಾಡಿ ‘‘ನಾನು ಯಾವತ್ತೂ ಟೈಮ್ಸ್ ನೌ ಚಾನೆಲ್ ನೋಡುವವನಾದರೂ ಇಂದು ನಿಮ್ಮ ಚಾನೆಲ್ಲಿನ ಚುನಾವಣಾ ವಿಶ್ಲೇಷಣೆ ವೀಕ್ಷಿಸಿದೆ. ಅದು ತುಂಬಾ ಚೆನ್ನಾಗಿತ್ತು’’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ ರಾಜ್‌ದೀಪ್ ‘‘ನಿಮಗೆ ದಿನವೂ ಮೀನು ಮಾರುಕಟ್ಟೆ ಇಷ್ಟವೆಂದು ನನಗನಿಸುತ್ತದೆ’’ ಎಂದು ಬಿಟ್ಟಿದ್ದರು. ಮೀನು ಮಾರುಕಟ್ಟೆ ಎಂದು ಹೇಳುವ ಮೂಲಕ ಅವರು ಸದಾ ಗದ್ದಲದಿಂದ ಕೂಡಿರುವ ಟೈಮ್ಸ್‌ನೌ ಚಾನೆಲ್ಲಿನ ಚರ್ಚಾ ಕಾರ್ಯಕ್ರಮವನ್ನು ಉಲ್ಲೇಖಿಸಿದ್ದಾರೆಂಬುದು ಇಲ್ಲಿ ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News