ಕಾಸರಗೋಡು: ಮದ್ರಸಾ ಅಧ್ಯಾಪಕನ ಇರಿದು ಕೊಲೆ

Update: 2017-03-21 04:22 GMT

ಕಾಸರಗೋಡು, ಮಾ.21: ಇಲ್ಲಿನ ಚೂರಿ ಎಂಬಲ್ಲಿ ಮದ್ರಸಾ ಅಧ್ಯಾಪಕನೋರ್ವನನ್ನು ತಂಡವೊಂದು ಅಧ್ಯಾಪಕರ ಕೋಣೆಗೆ ನುಗ್ಗಿ ಇರಿದು ಕೊಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕೊಡಗು ನಿವಾಸಿ ರಿಯಾಝ್ (30) ಕೊಲೆಗೀಡಾದ ಮದ್ರಸಾ ಅಧ್ಯಾಪಕ. ಮಸೀದಿ ಸಮೀಪವೇ ಉಸ್ತಾದರಿಗೆ 2 ಕೊಠಡಿಗಳಿದ್ದು ಒಂದು ಕೊಠಡಿಯಲ್ಲಿ ರಿಯಾಝ್ ಉಸ್ತಾದ್ ಹಾಗೂ ಇನ್ನೊಂದು ಕೊಠಡಿಯಲ್ಲಿ ಮಸೀದಿ ಖತೀಬ್ ಆಬ್ದುಲ್ ಅಝೀಝ್ ಮುಸ್ಲಿಯಾರ್ ಮಲಗಿದ್ದರು.  ಮಧ್ಯರಾತ್ರಿ ಶಬ್ದ ಕೇಳಿ ಖತೀಬ್ ಉಸ್ತಾದ್ ಕೊಠಡಿ ಬಾಗಿಲು ತೆರೆಯುವಷ್ಟರಲ್ಲಿ ಯತ್ವಾತದ್ವ ಕಲ್ಲು ತೂರಾಟ ನಡೆಯುತ್ತಿತ್ತೆನ್ನಲಾಗಿದೆ. ಇದರಿಂದ ಖತೀಬ್ ಉಸ್ತಾದ್ ಮೈಕ್ ಮೂಲಕ ರಿಯಾಝ್ ಉಸ್ತಾದ್ ಮೇಲೆ ಇರಿತ ನಡೆದಿದೆಯೆಂದು ಹೇಳಿಕೆ ನೀಡಿದರು.  ಇದರಂತೆ ಆಗಮಿಸಿದ ಸಮೀಪವಾಸಿಗಳು ರಕ್ತದ ಮುಡುವಿನಲ್ಲಿದ್ದ ರಿಯಾಝ್ ಉಸ್ತಾದರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. 

ಕುತ್ತಿಗೆಗೆ  ಕಡಿದು ಕೊಲೆ ಮಾಡಲಾಗಿದ್ದು, ಬೈಕ್ ನಲ್ಲಿ ಬಂದ  ಇಬ್ಬರು  ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಪೆರಿಯಾರಂ ವೈದ್ಯಕೀಯು ಕಾಲೇಜಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಒಂಬತ್ತು ವರ್ಷಗಳಿಂದ  ಹಳೆ ಚೂರಿ ಮುಹಿಯುದ್ದೀನ್ ಜುಮಾ ಮಸೀದಿ ಸಮೀಪದ  ಇಝ್ಝತ್ತುಲ್  ಇಸ್ಲಾಮ್ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. 

ಡಿವೈಎಸ್ಪಿ ವಿ.ಸುಕುಮಾರನ್ , ಸರ್ಕಲ್ ಇನ್ ಸ್ಪೆಕ್ಟರ್ ಅಬ್ದುಲ್ ರಹಮಾನ್, ಉತ್ತರ ವಲಯ ಎಡಿ ಜಿಪಿ ರಾಜೇಶ್  ದಿವಾನ್ , ಐಜಿ ಮಹಿಪಾಲ್ ಯಾದವ್  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪರಿಸರದ ಸಿಸಿಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳು ಜಿಲ್ಲೆಯಿಂದ ಹೊರರಾಜ್ಯಕ್ಕೆ ಪರಾರಿಯಾಗದಂತೆ ಪೊಲೀಸರು  ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲಾ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ.

ಇಂದು ಮುಸ್ಲಿಂ ಲೀಗ್ ಹರತಾಳ: ಕೊಲೆಯನ್ನು ಖಂಡಿಸಿ  ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ  ಇಂದು ಬೆಳಗ್ಗೆ ಆರರಿಂದ ಸಂಜೆ ಆರರ ತನಕ ಮುಸ್ಲಿಂ ಲೀಗ್ ಹರತಾಳಕ್ಕೆ ಕರೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News