×
Ad

ಲೈಂಗಿಕ ಕಿರುಕುಳ ವಿರುದ್ಧದ ಹೋರಾಟಕ್ಕೆ ರಜೆ ಸೌಲಭ್ಯ

Update: 2017-03-21 08:53 IST

ಹೊಸದಿಲ್ಲಿ, ಮಾ.21: ಕೇಂದ್ರ ಸರಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಆಗಿರುವ ಬಗ್ಗೆ ದೂರು ನೀಡಿದರೆ, ವಿಚಾರಣೆ ವೇಳೆ 90 ದಿನಗಳ ರಜೆ ಸೌಲಭ್ಯ ಪಡೆಯಲಿದ್ದಾರೆ. ಈ ಸಂಬಂಧ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ (ತಡೆ, ನಿಷೇಧ ಹಾಗೂ ವ್ಯಾಜ್ಯ ಪರಿಹಾರ) ಕಾಯ್ದೆ- 2013ರ ಅಡಿಯಲ್ಲಿ ಸೌಲಭ್ಯ ದೊರಕಲಿದೆ.

ದೂರು ನೀಡಿದ ಬಳಿಕ ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತರ ಮೇಲೆ ಪ್ರಭಾವ ಬೀರಲು ಮತ್ತು ಅವರನ್ನು ಬೆದರಿಸುವ ತಂತ್ರ ಅನುಸರಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಇಂಥ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸುವ ಆಂತರಿಕ ಸಮಿತಿ ಅಥವಾ ಸ್ಥಳೀಯ ಸಮಿತಿಯ ಶಿಫಾರಸಿನ ಮೇರೆಗೆ ಈ ವಿಶೇಷ ರಜೆ ಸೌಲಭ್ಯ ನೀಡಲಾಗುತ್ತದೆ. ಹೀಗೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೀಡುವ ಈ ವಿಶೇಷ ರಜೆಯನ್ನು ಅವರ ಇತರ ರಜೆಗಳಿಂದ ಕಡಿತಗೊಳಿಸುವುದಿಲ್ಲ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಮೂಲಗಳು ಹೇಳಿವೆ.

ಈ ಹೊಸ ಸೌಲಭ್ಯವನ್ನು ಒಳಗೊಂಡ ಕೇಂದ್ರೀಯ ನಾಗರಿಕ ಸೇವೆಗಳ (ರಜೆ) ತಿದ್ದುಪಡಿ ನಿಯಮಾವಳಿ-2017ನ್ನು ಈಗಾಗಲೇ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಹೊರಡಿಸಿದೆ.

ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಆಗುವ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ನಿರ್ವಹಿಸುವ ಬಗ್ಗೆ ಕಳೆದ ನವೆಂಬರ್‌ನಲ್ಲಿ ಮಾರ್ಗಸೂಚಿ ಹೊರಡಿಸಲಾಗಿತ್ತು. ಈ ಕುರಿತ ವಿಚಾರಣೆಗಳು 30 ದಿನಗಳ ಒಳಗೆ ಪೂರ್ಣಗೊಳ್ಳಬೇಕು ಹಾಗೂ ಯಾವುದೇ ಪರಿಸ್ಥಿತಿಯಲ್ಲೂ 90 ದಿನಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಣೆಯಾಗಬಾರದು ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News