ಮುಕೇಶ್ ಅಂಬಾನಿ ಭಾರತದ ಅತಿ ಶ್ರೀಮಂತ

Update: 2017-03-21 14:19 GMT

ಭಾರತದಲ್ಲಿ 101 ಬಿಲಿಯಾಧೀಶರು; ಅಮೆರಿಕದಲ್ಲಿ ಅತಿ ಹೆಚ್ಚು 565

ನ್ಯೂಯಾರ್ಕ್, ಮಾ. 21: ಜಗತ್ತಿನ ನಾಲ್ಕನೆ ಅತಿ ಹೆಚ್ಚು ಸಂಖ್ಯೆಯ ಬಿಲಿಯಾಧೀಶರು ಭಾರತದಲ್ಲಿದ್ದಾರೆ ಹಾಗೂ ಭಾರತದ 101 ಅತಿ ಶ್ರೀಮಂತರ ಪಟ್ಟಿಯ ಮೊದಲ ಸ್ಥಾನದಲ್ಲಿರುವವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ.

ಫೋರ್ಬ್ಸ್ ಮ್ಯಾಗಝಿನ್ ಹೊರಡಿಸಿದ ಜಾಗತಿಕ ಅತಿ ಶ್ರೀಮಂತರ ನೂತನ ಪಟ್ಟಿಯಲ್ಲಿ ಈ ವಿವರಗಳಿವೆ.

‘ಜಗತ್ತಿನ ಬಿಲಿಯಾಧೀಶರು, 2017’ ಜಾಗತಿಕ ಪಟ್ಟಿಯಲ್ಲಿ 2,043 ಅತಿ ಶ್ರೀಮಂತರಿದ್ದಾರೆ ಹಾಗೂ ಅವರ ಒಟ್ಟು ಸಂಪತ್ತು 7.67 ಟ್ರಿಲಿಯನ್ ಡಾಲರ್ (ಸುಮಾರು 500 ಲಕ್ಷ ಕೋಟಿ ರೂಪಾಯಿ). ಇದು ಕಳೆದ ವರ್ಷಕ್ಕಿಂತ 18 ಶೇಕಡದಷ್ಟು ಹೆಚ್ಚು.

ಪಟ್ಟಿಯ ಅಗ್ರ ಸ್ಥಾನದಲ್ಲಿರುವವರು ಮೈಕ್ರೊಸಾಫ್ಟ್‌ನ ಸಹಸ್ಥಾಪಕ ಬಿಲ್ ಗೇಟ್ಸ್. ಅವರು ಸತತ ನಾಲ್ಕು ವರ್ಷಗಳಿಂದ ಪ್ರಥಮ ಸ್ಥಾನವನ್ನು ಕಾದುಕೊಂಡಿದ್ದಾರೆ. ಕಳೆದ 23 ವರ್ಷಗಳಲ್ಲಿ 18 ಬಾರಿ ಅವರು ಜಗತ್ತಿನ ಅತಿ ಶ್ರೀಮಂತರಾಗಿದ್ದಾರೆ. ಗೇಟ್ಸ್‌ರ ಒಟ್ಟು ಸಂಪತ್ತು 86 ಬಿಲಿಯ ಡಾಲರ್ (5,61,365 ಕೋಟಿ ರೂಪಾಯಿ).

ಎರಡನೆ ಸ್ಥಾನದಲ್ಲಿರುವವರು 75.6 ಬಿಲಿಯ ಡಾಲರ್ (4,93,479 ಕೋಟಿ ರೂ.) ಸಂಪತ್ತಿನ ಒಡೆಯ, ಬರ್ಕ್‌ಶಯರ್ ಹ್ಯಾತ್‌ಅವೇ ಮುಖ್ಯಸ್ಥ ವಾರನ್ ಬಫೆಟ್.

ಮೂರನೆ ಸ್ಥಾನದಲ್ಲಿರುವ ಅಮೆಝಾನ್‌ನ ಜೆಫ್ ಬೆರೆಸ್ ಕಳೆದ ವರ್ಷದ ತನ್ನ ಸಂಪತ್ತಿಗೆ ಈ ಬಾರಿ 27.6 ಬಿಲಿಯ ಡಾಲರ್ (1,80,159 ಕೋಟಿ ರೂಪಾಯಿ) ಸೇರಿಸಿದ್ದು, ಅವರ ಒಟ್ಟು ಸಂಪತ್ತು 72.8 ಬಿಲಿಯ ಡಾಲರ್ (4,75,202 ಕೋಟಿ ರೂಪಾಯಿ)ಗೆ ಏರಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 3.5 ಬಿಲಿಯ ಡಾಲರ್ (22,846 ಕೋಟಿ ರೂಪಾಯಿ) ಸಂಪತ್ತು ಹೊಂದಿದ್ದು, ಪಟ್ಟಿಯಲ್ಲಿ 544ನೆ ಸ್ಥಾನ ಹೊಂದಿದ್ದಾರೆ.

ಅಮೆರಿಕದಲ್ಲಿ ಅತಿ ಹೆಚ್ಚು ಅಂದರೆ ದಾಖಲೆಯ 565 ಬಿಲಿಯಾಧೀಶರಿದ್ದಾರೆ. ಕಳೆದ ವರ್ಷ ಅಲ್ಲಿ 540 ಬಿಲಿಯಾಧೀಶರಿದ್ದರು. 319 ಬಿಲಿಯಾಧೀಶರನ್ನು ಹೊಂದಿರುವ ಚೀನಾ ಎರಡನೆ ಹಾಗೂ 114 ಬಿಲಿಯಾಶೀಶರನ್ನು ಒಳಗೊಂಡ ಜರ್ಮನಿ ಮೂರನೆ ಸ್ಥಾನದಲ್ಲಿದೆ.
ಬಿಲಿಯಾಧೀಶರ ಸಂಖ್ಯೆಯಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದೆ.

1.51 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯ

ಜಾಗತಿಕ ಪಟ್ಟಿಯಲ್ಲಿ 33ನೆ ಸ್ಥಾನದಲ್ಲಿರುವ 59 ವರ್ಷದ ಅಂಬಾನಿ, ಭಾರತದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು 23.2 ಬಿಲಿಯ ಡಾಲರ್ (1,51,438 ಕೋಟಿ ರೂಪಾಯಿ) ಸಂಪತ್ತಿನ ಒಡೆಯರಾಗಿದ್ದಾರೆ.

ಅವರ ತಮ್ಮ ಅನಿಲ್ ಅಂಬಾನಿ 270 ಕೋಟಿ ಡಾಲರ್ (17,624 ಕೋಟಿ ರೂ.) ಸಂಪತ್ತಿನೊಂದಿಗೆ ಜಾಗತಿಕ ಪಟ್ಟಿಯಲ್ಲಿ 745ನೆ ಸ್ಥಾನದಲ್ಲಿದ್ದಾರೆ.

ಭಾರತೀಯ ಬಿಲಿಯಾಧೀಶರ ಪಟ್ಟಿಯಲ್ಲಿರುವ ಇನ್ನೊಂದು ಹೆಸರು ಆರ್ಸಲರ್ ಮಿತ್ತಲ್‌ನ ಅಧ್ಯಕ್ಷ ಹಾಗೂ ಸಿಇಒ ಲಕ್ಷ್ಮಿ ಮಿತ್ತಲ್. ಜಾಗತಿಕ ಪಟ್ಟಿಯಲ್ಲಿ 56ನೆ ಸ್ಥಾನದಲ್ಲಿರುವ ಅವರು 16.4 ಬಿಲಿಯ ಡಾಲರ್ (1,07,051 ಕೋಟಿ ರೂ.) ಸಂಪತ್ತು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News