ಮಹಾಭಾರತಕ್ಕೆ ಅವಮಾನಿಸಿದ ಆರೋಪ: ಕಮಲ್ ಹಾಸನ್ ವಿರುದ್ಧ ಪಿಐಎಲ್

Update: 2017-03-21 16:00 GMT

ಹೊಸದಿಲ್ಲಿ,ಮಾ.21: ಕಮಲ್‌ಹಾಸನ್ ಅವರು ಹಿಂದೂ ಪುರಾಣ ಮಹಾಭಾರತದ ಬಗ್ಗೆ ನೀಡಿರುವ ವಿವಾದಿತ ಹೇಳಿಕೆಯು ಹಿಂದೂಗಳ ಭಾವನೆಗೆ ಘಾಸಿಯುಂಟು ಮಾಡಿದೆಯೆಂದು ಆರೋಪಿಸಿ ತಮಿಳುನಾಡಿನ ಹಿಂದೂ ಮಕ್ಕಳ್ ಕಚ್ಚಿ (ಎಚ್‌ಎಂಕೆ) ತಿರುನಲ್ವೇಲಿ ಜಿಲ್ಲಾ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದೆ.

   ಕಮಲ್ ಅವರು ಇತ್ತೀಚೆಗೆ ಪ್ರಾದೇಶಿಕ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ, ಮಹಿಳೆಯನ್ನು (ದ್ರೌಪದಿ) ಜೂಜಿಗೆ ಒತ್ತೆಯಿಟ್ಟ ಕಥೆಯಿರುವ ಪುಸ್ತಕವನ್ನು ನಮ್ಮ ದೇಶ ಓದುತ್ತಿದೆ ಎಂದು ಹೇಳಿದ್ದರು. ಕಮಲ್‌ಹಾಸನ್ ಅವರು ಮಹಾಭಾರತದ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ಎಚ್‌ಎಂಕೆ ಮಾರ್ಚ್ 15ರಂದು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿತ್ತು. ಚಲನಚಿತ್ರ ನಟನ ಹೇಳಿಕೆಯು ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುತ್ತದೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುತ್ತಿದೆ ಎಂದು ಎಚ್‌ಎಂಕೆ ತನ್ನ ದೂರಿನಲ್ಲಿ ತಿಳಿಸಿದ್ದು, ಕಮಲ್ ಹಾಸನ್ ಹಿಂದೂ ವಿರೋಧಿಯೆಂದು ಆಪಾದಿಸಿದೆ.

ಈ ಮಧ್ಯೆ ಕಮಲ್ ಅವರಿಗೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿದ್ದು, ಈ ವಿವಾದದ ಹಿಂದೆ ಎಡಿಎಂಕೆಯ ಕೈವಾಡವಿದೆಯೆಂದು ಅದು ಹೇಳಿದೆ. ತನ್ನ ವಿರುದ್ಧ ಧ್ವನಿಯೆತ್ತುತ್ತಿರುವ ಕಮಲ್ ಅವರನ್ನು ಗುರಿಯಿರಿಸಿ ಎಡಿಎಂಕೆ, ವಿವಾದವನ್ನು ಎಬ್ಬಿಸಿದೆಯೆಂದು ಡಿಎಂಕೆ ವಕ್ತಾರ ಎ.ಶರವಣನ್ ಹೇಳಿದ್ದಾರೆ.

 ಮಾಜಿ ಚಿತ್ರನಟಿ, ತಮಿಳುನಾಡಿನ ಕಾಂಗ್ರೆಸ್ ವಕ್ತಾರೆ ಖುಶ್ಬೂ ಸುಂದರ್ ಹೇಳಿಕೆಯೊಂದನ್ನು ನೀಡಿ, ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರು ತನ್ನ ವೈಯಕ್ತಿಕ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಪ್ರಚಾರದ ಉದ್ದೇಶಕ್ಕಾಗಿ ಇಂತಹ ಕೆಲವು ಪುಂಡು ಸಂಘಟನೆಗಳು ವಿವಾದವನ್ನು ಸಷ್ಟಿಸುತ್ತಿವೆಯೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News