ಚೀನಾದ ಅಪಾರ್ಟ್‌ಮೆಂಟ್ ಬ್ಲಾಕ್ ಮೂಲಕ ಸಾಗುತ್ತಿದೆ ಮಾನೊರೈಲು

Update: 2017-03-21 18:04 GMT

ಬಿಜಿಂಗ್,ಮಾ.21: ಚೀನಾದ ಚಾಂಗ್‌ಕಿಂಗ್ ನಗರದಲ್ಲಿ ಎಲ್ಲೆಲ್ಲೂ ಗಗನಚುಂಬಿ ಕಟ್ಟಡಗಳೇ ತುಂಬಿವೆ. ಹೀಗಾಗಿ ‘ಪರ್ವತ ನಗರಿ ’ಎಂದೇ ಕರೆಯಲಾಗುವ ಈ ನಗರದಲ್ಲಿ ಜನಸಂಖ್ಯೆ ಮಿತಿಮೀರಿದ್ದು, ಬರೋಬ್ಬರಿ 85 ಲಕ್ಷ ಜನರು ಇಲ್ಲಿ ವಾಸವಾಗಿದ್ದಾರೆ. ಕಟ್ಟಡಗಳಿಂದಲೇ ತುಂಬಿರುವ ಈ ನಗರದ ಪ್ರದೇಶವೊಂದರಲ್ಲಿ ರೈಲು ಮಾರ್ಗವೊಂದನ್ನು ನಿರ್ಮಿಸುವಂತೆ ಆಡಳಿತವು ಇಂಜಿನಿಯರ್‌ಗಳಿಗೆ ಸೂಚಿಸಿತ್ತು.

ಹೊಸ ಮಾರ್ಗ ಹಾಕಲು ಅಲ್ಲಿಯ ಭೂಮಿಯಲ್ಲಂತೂ ಜಾಗವಿಲ್ಲ. ಒಂದೇ ಭೂಗತ ಮಾರ್ಗ ನಿರ್ಮಿಸಬೇಕು ಇಲ್ಲವೇ ನಗರದ ತಲೆಯ ಮೇಲಿನ ಆಗಸದಲ್ಲಿ ಅದಕ್ಕೆ ವ್ಯವಸ್ಥೆ ಮಾಡಬೇಕು. ಆದರೆ ಅಲ್ಲಿಯ ಘಾಟಿ ಇಂಜಿನಿಯರ್‌ಗಳು ಸರಳ ಪರಿಹಾರವೊಂದನ್ನು ಕಂಡುಕೊಂಡು ಅಪಾರ್ಟ್‌ಮೆಂಟ್ ಬ್ಲಾಕ ಮೂಲಕವೇ ರೈಲು ಮಾರ್ಗವನ್ನು ನಿರ್ಮಿಸಿದ್ದಾರೆ. ಈ ಬ್ಲಾಕ್‌ನಲ್ಲಿಯೇ ನಿಲ್ದಾಣವನ್ನು ಸ್ಥಾಪಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೊನೊರೈಲಿಗಾಗಿ ನೆಲದಿಂದ ಸುಮಾರು ಎತ್ತರದಲ್ಲಿ ಹಳಿಗಳನು ್ನ ಅಳವಡಿಸಲಾಗಿದ್ದು, ಕಟ್ಟಡದ ಎಂಟನೆ ಮಹಡಿಯಲ್ಲಿ ಬೃಹತ್ ರಂಧ್ರವನ್ನು ಕೊರೆದು ಮಾರ್ಗವನ್ನು ನಿರ್ಮಿಸಲಾಗಿದೆ.

ವಿಚಿತ್ರವೆಂದರೆ ರೈಲಿನ ಶಬ್ದದಿಂದ ಇಲ್ಲಿಯ ನಿವಾಸಿಗಳಿಗೆ ಕಿಂಚಿತ್ತೂ ತೊಂದರೆಯಾಗುತ್ತಿಲ್ಲ. ರೈಲು ಕಟ್ಟಡದ ಮೂಲಕ ಹಾದುಹೋಗುವಾಗ ಕೇವಲ 60 ಡೆಸಿಬಲ್‌ಗಳಷ್ಟು ಶಬ್ದ ಕೇಳಿ ಬರುತ್ತಿದ್ದು, ಇದನ್ನು ಯಾವುದೇ ರೆಸ್ಟೋರಂಟ್‌ನಲ್ಲಿಯ ಗದ್ದಲಕ್ಕೆ ಹೋಲಿಸಬಹುದಾಗಿದೆ.ಈ ರೈಲು ಮಾರ್ಗ ನಿರ್ಮಾಣದಿಂದ ಈ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಉತ್ತಮಗೊಂಡಿರುವುದರಿಂದ ಇಲ್ಲಿಯ ಆಸ್ತಿಗಳ ವೌಲ್ಯದಲ್ಲಿ ಏರಿಕೆಯಾಗಿದೆ.

ರೈಲ್ವೆ ಮಾರ್ಗ ನಿರ್ಮಾಣಗೊಂಡ ಸಮಯದಲ್ಲಿಯೇ ಈ ಅಪಾರ್ಟ್‌ಮೆಂಟ್ ಬ್ಲಾಕ್ ಕೂಡ ನಿರ್ಮಾಣಗೊಂಡಿದ್ದು ತನ್ನದೇ ಆದ ನಿಲ್ದಾಣವನ್ನು ಹೊಂದಿದೆ.

ನಮ್ಮ ನಗರವು ಕಟ್ಟಡಗಳಿಂದಲೇ ತುಂಬಿ ಹೋಗಿದ್ದು ಹೊಸದಾಗಿ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ನಿಜಕ್ಕೂ ಸವಾಲಿನದ್ದಾಗಿದೆ. ಹೀಗಾಗಿಯೇ ಇಂಜಿನಿಯರ್‌ಗಳು ಈ ವಿನೂತನ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ಎಂದು ನಗರದ ಸಾರಿಗೆ ವಕ್ತಾರ ಯುವಾನ್ ಚೆಂಗ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News