ಹಿರೇಬಂಡಾಡಿಯಲ್ಲಿ ಆಲಿಕಲ್ಲು ಮಳೆ

Update: 2017-03-21 18:53 GMT

ಗಾಳಿಯ ಅವಾಂತರಕ್ಕೆ ಕೃಷಿ ಸಹಿತ ಅಪಾರ ಹಾನಿ

ಉಪ್ಪಿನಂಗಡಿ, ಮಾ.21: ಹಿರೇ ಬಂಡಾಡಿ ಗ್ರಾಪಂ ವ್ಯಾಪ್ತಿ ಯಲ್ಲಿ ಮಂಗಳವಾರ ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಶಾಖೆಪುರ ಹಾಲು ಉತ್ಪಾ ದಕರ ಮಹಿಳಾ ಸಹಕಾರಿ ಸಂಘದ ಮೇಲ್ಫಾವಣಿಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ ಧ್ವಂಸಗೊಂಡಿದೆ. ಕರೆಂಕಿ ಬಳಿ ನೆಹರು ತೋಟ- ವಳಕಡಮ ಸಂಪರ್ಕ ರಸ್ತೆಗೆ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದೆ. ಕುಬಲ ಎಂಬಲ್ಲಿ ಮರ ಬಿದ್ದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾನಿಗೊಂಡಿದೆ. ದಾಮೋದರ ಕೇಪು ಎಂಬವರಿಗೆ ಸೇರಿದ 15 ಹಾಗೂ ಉಮೇಶ್ ಎಂಬವರಿಗೆ ಸೇರಿದ ಸುಮಾರು 20 ಅಡಿಕೆ ಮರಗಳು ಮುರಿದುಬಿದ್ದಿವೆ. ಕಾರೆದಕೋಡಿ ಹಾಗೂ ಸೀಂಕ್ರ ಕೊಡಂಗೆ ಎಂಬಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಉರುಳಿಬಿದ್ದಿದೆ. ಇದರಿಂದ ತಂತಿಗಳು ತುಂಡಾಗಿದ್ದು, ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ನಿಡ್ಡೆಂಕಿಯ ಚಿದಾನಂದ ಎಂಬವರ ದನದ ಕೊಟ್ಟಿಗೆಯ ಸುಮಾರು 15ರಷ್ಟು ಶೀಟ್‌ಗಳು ಗಾಳಿಗೆ ಹಾರಿ ಹೋಗಿ ಸಂಪೂರ್ಣ ಧ್ವಂಸಗೊಂಡಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಹಿರೇಬಂಡಾಡಿ ಗ್ರಾಪಂ ಸದಸ್ಯೆ ಚಂದ್ರಾವತಿಯವರ ಜಾಗದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮರ ಬಿದ್ದು ತುಂಡಾಗಿವೆ. ಕರೆಂಕಿ ವೆಂಕಟ್ರಮಣ ಗೌಡರ 40 ಅಡಿಕೆಮರಗಳು ಮುರಿದು ಬಿದ್ದಿವೆ. ಕೊಟ್ಟಿಗೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ದಿ. ನಾರ್ಣಪ್ಪ ಗೌಡ ಎಂಬವರಿಗೆ ಸೇರಿದ 50 ಅಡಿಕೆ ಮರಗಳು ಮುರಿದು ಬಿದ್ದಿವೆ. ಹೀಗೆ ಅಕಾಲಿಕ ಮಳೆಯೊಂದಿಗೆ ಬೀಸಿದ ಸುಳಿಗಾಳಿ ಹಿರೇಬಂಡಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಹಾನಿ ಎಸಗಿದೆ. ಹಲವೆಡೆಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ. ಉಪ್ಪಿನಂಗಡಿ ಸುತ್ತಮುತ್ತವೂ ಮಳೆಯಾಗಿದ್ದು, ಆದರೆ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಹಿರೇಬಂಡಾಡಿ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಜಲ್ಲಿಕಲ್ಲಿನಷ್ಟು ದೊಡ್ಡದಾದ ಆಲಿಕಲ್ಲುಗಳು ಭೂಮಿಗೆ ಬೀಳುತ್ತಿದ್ದವು. ಹಲವು ಕಡೆ ಗಳಲ್ಲಿ ಮೇಲ್ಛಾವಣಿಗೆ ಅಳವಡಿಸಿದ ಸಿಮೆಂಟ್ ಶೀಟ್‌ಗಳು, ಹೆಂಚುಗಳು ಆಲಿಕಲ್ಲು ಬಿದ್ದು ಹಾನಿಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News