ಜಲ ಸಂಪನ್ಮೂಲದ ಮಹತ್ವ ಅರಿಯೋಣ

Update: 2017-03-21 18:54 GMT

ಮಾನ್ಯರೆ,

ಇಂದು ನಾವು ‘ವಿಶ್ವ ಜಲದಿನ’ ಆಚರಿಸುತ್ತಿದ್ದೇವೆ. ನಮ್ಮ ಭೂ ಮಂಡಲದ ಮೇಲೆ ಉಸಿರಾಡುವ ಪ್ರತೀಯೊಂದು ಜೀವ ಸಂಕುಲಕ್ಕೂ ಜಲವೇ ಜೀವ ಮೂಲವಾಗಿದೆ. ಅದರಲ್ಲೂ ಮನುಷ್ಯನ ಜೀವನಕ್ಕೆ ಜಲ ಸಂಪನ್ಮೂಲ ಅತೀ ಆವಶ್ಯಕ ಮತ್ತು ಅಷ್ಟೇ ಅನಿವಾರ್ಯವು ಹೌದು. ಏಕೆಂದರೆ ನೀರು ಇರದೆ ನಾವು ಒಂದು ದಿನ ಬದುಕಲು ಕಷ್ಟ ಸಾಧ್ಯ. ಅಲ್ಲದೆ ಇಂದು ನಮಗೆ ಜಲ ಸಂಪನ್ಮೂಲ ಎಷ್ಟು ಅಗತ್ಯ ಎಂದರೆ ವ್ಯವಸಾಯದಿಂದ ತೊಡಗಿ, ವಿದ್ಯುತ್ ತಯಾರಿಕೆ, ಕೈಗಾರಿಕೆಗಳ ಅಭಿವೃದ್ಧಿ ಮುಂತಾದ ಹಲವು ಕ್ಷೇತ್ರಗಳು ನೀರಿನ ಆವಶ್ಯಕತೆಯನ್ನು ಬಯಸುತ್ತವೆ. ನಮ್ಮ ದೈನಂದಿನ ನಿತ್ಯಕಾರ್ಯಗಳಲ್ಲಂತೂ ನೀರು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
 ಹೀಗಿರುವಾಗ ಸತತ ಮೂರು ವರ್ಷಗಳಿಂದ ಮಳೆ ಕೈ ಕೊಟ್ಟ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಮಂದುವರಿದಿದೆ. ಇದರಿಂದಾಗಿ ಬೇಸಿಗೆಯ ಮೊದಲೇ ಜಲಾಶಯಗಳು, ನದಿ, ಕೆರೆ, ಹಳ್ಳ, ಬಾವಿ, ಬೋರ್‌ವೆಲ್ ಬತ್ತಿ ಹೋಗಿವೆ. ರಾಜ್ಯದ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಜಲಕ್ಷಾಮ ಉಂಟಾಗಿ ಹನಿ ನೀರಿಗೂ ಪರದಾಡುವಂತಾಗಿದೆ. ಆದ್ದರಿಂದ ರಾಜ್ಯದಲ್ಲಿ ಎಲ್ಲಿ ನೀರಿನ ಲಭ್ಯತೆ ಇದೆಯೋ ಅಲ್ಲಿ ಭೂಮಿ ಮೇಲಿನ ಜೀವ ಸಂಕುಲಗಳ ಬದುಕಿಗೆ ಅಮೃತವಾದ ಅಮೂಲ್ಯ ಜೀವ ಜಲ ಸಂಪನ್ಮೂಲವನ್ನು ಮಿತವಾಗಿ ಬಳಸಬೇಕಾಗಿದೆ. ಜೊತೆಗೆ ಎಲ್ಲೆಡೆ ಪೋಲಾಗುತ್ತಿರುವ ಜಲವನ್ನು ವ್ಯರ್ಥವಾಗದಂತೆ ಸಂರಕ್ಷಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ನೀರನ್ನು ಮಿತವಾಗಿ ಬಳಸಿ ವ್ಯಯವಾಗದಂತೆ ತಡೆಯಲು ಪ್ರಜ್ಞಾವಂತ ನಾಗರಿಕ ಸಮಾಜ ಪ್ರತೀ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
 

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News