ಕಾಂಬೋಡಿಯದಿಂದ ಅಮೆರಿಕಕ್ಕೆ ಎದೆ ಹಾಲು ರಫ್ತು ಉದ್ಯಮಕ್ಕೆ ತಡೆ

Update: 2017-03-22 13:06 GMT

ಫ್ನೋಮ್ ಪೆನ್ (ಕಾಂಬೋಡಿಯ), ಮಾ. 22: ಕಾಂಬೋಡಿಯದ ಬಡ ತಾಯಂದಿರ ಎದೆ ಹಾಲನ್ನು ಅಮೆರಿಕಕ್ಕೆ ಮಾರಾಟ ಮಾಡುವ ಕಂಪೆನಿಯೊಂದನ್ನು ಯುನಿಸೆಫ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ದೇಶದ ಒಳಗಿನ ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶಗಳ ವಾಣಿಜ್ಯೀಕರಣದ ವಿರುದ್ಧವೂ ಧ್ವನಿ ಏರಿಸಿದೆ.

ಅಮೆರಿಕದ ಉಟಾಹ್ ರಾಜ್ಯದ ಕಂಪೆನಿ ‘ಆ್ಯಂಬ್ರೋಸ್ಯ ಲ್ಯಾಬ್ಸ್’ ನಡೆಸುತ್ತಿರುವ ಎದೆ ಹಾಲು ರಪ್ತು ಉದ್ಯಮವನ್ನು ನಿಲ್ಲಿಸಿರುವುದಾಗಿ ಕಾಂಬೋಡಿಯ ಹೇಳಿದ ಬಳಿಕ ಈ ವಾರ ಈ ವಿಷಯ ಪ್ರಚಲಿತಕ್ಕೆ ಬಂದಿದೆ.

ವಿದೇಶಗಳಿಂದ ಪಡೆಯಲಾದ ಮಾನವ ಎದೆ ಹಾಲನ್ನು ಸಂಗ್ರಹಿಸಿ ಅಮೆರಿಕಕ್ಕೆ ಪೂರೈಸುವ ಮೊದಲ ಕಂಪೆನಿ ತಾನು ಎಂಬುದಾಗಿ ಆ್ಯಂಬ್ರೋಸ್ಯ ಲ್ಯಾಬ್ಸ್ ಹೇಳಿಕೊಳ್ಳುತ್ತಿದೆ.

ಈ ಕಂಪೆನಿಯ ಗ್ರಾಹಕರು ಅಮೆರಿಕದ ತಾಯಂದಿರು. ತಮ್ಮ ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶ ಪೂರೈಸಲು ಸಾಧ್ಯವಾಗದ ಅಥವಾ ಸಾಕಷ್ಟು ಎದೆ ಹಾಲು ಪೂರೈಸಲಾಗದ ತಾಯಂದಿರುವ ಆಮದಾಗುವ ಎದೆ ಹಾಲಿಗೆ ಮೊರೆ ಹೋಗುತ್ತಾರೆ.

ಕಾಂಬೋಡಿಯದಲ್ಲಿ ಹಾಲನ್ನು ಸಂಗ್ರಹಿಸಿ, ಶೀತಲೀಕರಿಸಿ ಅಮೆರಿಕಕ್ಕೆ ಸಾಗಿಸಲಾಗುತ್ತದೆ. ಕಂಪೆನಿಯು ಅಮೆರಿಕದಲ್ಲಿ ಅದನ್ನು ಪ್ಯಾಶ್ಚರೀಕರಿಸಿ 5 ಔನ್ಸ್ (147 ಎಂಎಲ್) ಪ್ಯಾಕೊಂದಕ್ಕೆ 20 ಡಾಲರ್ (ಸುಮಾರು 1,310 ರೂ.)ನಂತೆ ಮಾರಾಟ ಮಾಡುತ್ತಿತ್ತು.

ಕಂಪೆನಿಗೆ ಎದೆ ಹಾಲನ್ನು ಮಾರಾಟ ಮಾಡುತ್ತಿದ್ದವರು ಕಾಂಬೋಡಿಯದ ರಾಜಧಾನಿ ಫ್ನೋಮ್ ಪೆನ್‌ನ ಬಡತನದ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರು. ತಮ್ಮ ಅಲ್ಪ ಆದಾಯವನ್ನು ಹೆಚ್ಚಿಸಲು ಈ ಯೋಜನೆ ಅವರಿಗೆ ಸಹಾಯಕವಾಗಿತ್ತು.

ಹೆಚ್ಚುವರಿ ಎದೆ ಹಾಲು ಕಾಂಬೋಡಿಯದಲ್ಲೇ ಉಳಿಯಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಶ್ವಸಂಸ್ಥೆಯ ಘಟಕ ಯುನಿಸೆಫ್ ಹೇಳಿದೆ. ಆಗ್ನೇಯ ಏಶ್ಯದ ಬಡ ದೇಶಗಳ ಪೈಕಿ ಒಂದಾಗಿರುವ ಕಾಂಬೋಡಿಯದಲ್ಲಿ ಹೆಚ್ಚಿನ ಮಕ್ಕಳು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News