ಡ್ರೈವರ್ ಕೊಲೆ ಪ್ರಕರಣ: ಐಎಎಸ್ ಅಧಿಕಾರಿಯ ಬಂಧನ
ಹೈದರಾಬಾದ್, ಮಾ.22: ಕಳೆದ ವಾರ ನಡೆದಿದ್ದ ಬಿ.ನಾಗರಾಜು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ ಪೊಲೀಸರು ತೆಲಂಗಾಣದ ಐಎಎಸ್ ಅಧಿಕಾರಿ ಮತ್ತವರ ಪುತ್ರನನ್ನು ಬಂಧಿಸಿದ್ದಾರೆ.
ಕೃಷಿ ನಿಗಮದ ಜಂಟಿ ಕಾರ್ಯದರ್ಶಿ ವೆಂಕಟೇಶ್ವರ ರಾವ್ ಮತ್ತವರ ಪುತ್ರ ಧರಾವತ್ ವೆಂಕಟ ಸುಕ್ರುತ್ ಅವರನ್ನು ಕಾರಿನ ಡ್ರೈವರ್ ಬಿ.ನಾಗರಾಜು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಪ.ವಲಯ) ಎ.ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.
ಕಾನೂನು ವಿದ್ಯಾರ್ಥಿಯಾಗಿದ್ದ ವೆಂಕಟ ಮತ್ತು ನಾಗರಾಜು ಆತ್ಮೀಯರಾಗಿದ್ದರು. ವೆಂಕಟೇಶ್ವರ ರಾವ್ ಅವರ ಪತ್ನಿ (ವೆಂಕಟನ ತಾಯಿ)ಯ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು ಜೊತೆ ಆಗಾಗ ಮದ್ಯ ಸೇವಿಸುವ ಹವ್ಯಾಸ ಬೆಳೆಸಿಕೊಂಡಿದ್ದ ವೆಂಕಟ. ಮಾ.17ರ ರಾತ್ರಿ ಇಬ್ಬರೂ ಯೂಸುಫ್‌ಗುಡ್ಡ ಪ್ರದೇಶದಲ್ಲಿರುವ ಕಟ್ಟಡವೊಂದರ ಟೆರೇಸ್ ಮೇಲೇರಿ ಜತೆಯಾಗಿ ಮದ್ಯಪಾನ ಆರಂಭಿಸಿದ್ದರು.
ಮದ್ಯದ ನಶೆಯಲ್ಲಿ ನಾಗರಾಜನ ಜೊತೆ ವೆಂಕಟ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದ್ದು ಇಬ್ಬರ ಮಧ್ಯೆ ವಾಗ್ವಾದ ಆರಂಭವಾಗಿದೆ. ಈ ವೇಳೆ ವೆಂಕಟ ಅಲ್ಲಿ ಬಿದ್ದಿದ್ದ ಇಟ್ಟಿಗೆಯೊಂದರಿಂದ ನಾಗರಾಜನ ತಲೆಗೆ ಬಲವಾಗಿ ಬಡಿದಾಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ವೆಂಕಟ ಅಲ್ಲಿಂದ ತೆರಳಿದ್ದಾನೆ.
ಮಾ.18ರಂದು ಮುಂಜಾವಿನ ಸಮಯ ಮತ್ತೆ ಟೆರೇಸ್‌ಗೆ ಹೋಗಿದ್ದ ವೆಂಕಟ ನಾಗರಾಜನ ಮೊಬೈಲ್ ಫೋನ್ ಹಿಡಿದುಕೊಂಡು ಕೆಳಗೆ ಬಂದವ ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಳಿಕ ತನ್ನ ತಂದೆ ಹಾಗೂ ಇತರ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾನೆ. ಮೃತದೇಹವನ್ನು ತಕ್ಷಣ ವಿಲೇವಾರಿ ಮಾಡಲು ಆತನ ತಂದೆ ಸೂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದರಂತೆ ಟೆರೇಸ್‌ಗೆ ಹೋದ ವೆಂಕಟ್, ಕೊಳೆತು ಹೋಗುವ ಸ್ಥಿತಿ ತಲುಪಿದ್ದ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಲಿಫ್ಟ್‌ನ ಬಳಿ ತಂದಾಗ ಕಟ್ಟಡದ ನಿವಾಸಿಗಳಿಗೆ ಈತನ ಚಲನವಲನದ ಬಗ್ಗೆ ಸಂಶಯ ಮೂಡಿ ಪೊಲೀಸರಿಗೆ ತಿಳಿಸಿದ್ದಾರೆ. ಗೋಣಿಚೀಲವನ್ನು ಅಲ್ಲೇ ಬಿಟ್ಟು ಸ್ಥಳದಿಂದ ತಪ್ಪಿಸಿಕೊಂಡಿದ್ದ ವೆಂಕಟ. ಐಎಎಸ್ ಅಧಿಕಾರಿ ಕೂಡಾ ಕಟ್ಟಡದಿಂದ ತೆರಳುತ್ತಿರುವುದನ್ನು ಕಾವಲುಗಾರ ಮತ್ತು ಹಣ್ಣು ವ್ಯಾಪಾರಿಯೋರ್ವ ನೋಡಿದ್ದ .
ಗೋಣಿಚೀಲದಲ್ಲಿದ್ದ ಮೃತದೇಹ ನಾಗರಾಜುವಿನದ್ದು ಎಂದು ಖಚಿತಪಡಿಸಿಕೊಂಡ ಪೊಲೀಸರು ಕಟ್ಟಡದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಯ ಆಧಾರದಲ್ಲಿ ವೆಂಕಟನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಕೊಲೆಯ ಆರೋಪದಲ್ಲಿ ವೆಂಕಟನನ್ನು ಮತ್ತು ಸಾಕ್ಷನಾಶಕ್ಕೆ ಪ್ರಯತ್ನಿಸಿದ ಹಾಗೂ ಅಪರಾಧಿಗೆ ಸಹಕರಿಸಿದ ಆರೋಪದಡಿ ಆತನ ತಂದೆಯನ್ನು ಬಂಧಿಸಿದರು. ಪೊಲೀಸರ ತನಿಖೆ ವೇಳೆ ತೀವ್ರ ಬಳಲಿಕೆಯಿಂದ ಕುಸಿದುಬಿದ್ದ
ವೆಂಕಟೇಶ್ವರ ರಾವ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.