ಪಂಜಾಬ್‌ನಲ್ಲಿ ‘ಕೈ’ ಗೆಲುವಿನ ರೂವಾರಿ ‘ಪಿಕೆ’ಗೆ ಗುಜರಾತ್ ಚುನಾವಣೆ ಪ್ರಚಾರದ ಸಾರಥ್ಯಕ್ಕೆ ನಿರ್ಧಾರ

Update: 2017-03-22 15:39 GMT

ಹೊಸದಿಲ್ಲಿ, ಮಾ.22: ಈ ವರ್ಷಾಂತ್ಯ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ವ್ಯೆಹ ನಿಪುಣ ಪ್ರಶಾಂತ್ ಕಿಶೋರ್ (ಪಿ.ಕೆ.ಎಂದೇ ಜನಪ್ರಿಯ) ಅವರ ನೆರವು ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಬಿಹಾರ ಮತ್ತು ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಶಸ್ಸು ಪಡೆಯಲು ಪ್ರಶಾಂತ್ ಕಿಶೋರ್ ಅವರ ಪ್ರಚಾರ ತಂತ್ರಗಾರಿಕೆ ಪ್ರಧಾನ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತವರೂರಿನಲ್ಲೇ ಬಿಜೆಪಿಗೆ ಸೆಡ್ಡು ಹೊಡೆಯಲು ಪ್ರಶಾಂತ್ ಅವರ ಚುನಾವಣಾ ತಂತ್ರಗಾರಿಕೆ ನಮಗೆ ಅಗತ್ಯವಿದೆ ಎಂದು ಗುಜರಾತ್ ವಿಧಾನಸಭೆಯ ವಿರೋಧ ಪಕ್ಷದ ಮುಖಂಡ, ಕಾಂಗ್ರೆಸ್‌ನ ಶಂಕರ್‌ಸಿಂಗ್ ವೇಲಾ ತಿಳಿಸಿದ್ದಾರೆ.

ಪಂಜಾಬ್ ಚುನಾವಣೆಯಲ್ಲಿ ಪಕ್ಷದ ಗೆಲುವಿನಲ್ಲಿ ಕಿಶೋರ್ ಅವರ ಕೊಡುಗೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಸ್ಮರಿಸಿಕೊಂಡಿದ್ದಾರೆ. ಪಂಜಾಬಿನಲ್ಲಿ ಪಕ್ಷದ ಗೆಲುವಿನಲ್ಲಿ ಕಿಶೋರ್ ಮತ್ತವರ ತಂಡದ ಪಾತ್ರ ಮಹತ್ವದ್ದು ಎಂದು ಈ ಹಿಂದೆಯೇ ಹೇಳಿದ್ದೇನೆ ಎಂದು ಅಮರೀಂದರ್ ಸಿಂಗ್ ತಿಳಿಸಿದ್ದಾರೆ.

ಪ್ರಶಾಂತ್ ಕಿಶೋರ್ ಮತ್ತವರ ತಂಡದ ಕಠಿಣ ಪರಿಶ್ರಮ ಮತ್ತು ಕೊಡುಗೆಯನ್ನು ಪಕ್ಷ ಗೌರವಿಸುತ್ತದೆ. ಕಿಶೋರ್ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪ್ರಚಾರವನ್ನು ತಿರಸ್ಕರಿಸಿ ಭವಿಷ್ಯದಲ್ಲಿ ಎದುರಾಗುವ ಎಲ್ಲಾ ಚುನಾವಣೆಯಲ್ಲೂ ನಮ್ಮಲ್ಲಿ ಲಭ್ಯವಿರುವ ಪ್ರತಿಭೆಯನ್ನು ಸೇರಿಸಿಕೊಂಡು ಸವಾಲನ್ನು ಎದುರಿಸಲಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News